

ಹುಣಸೂರು: ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಚಿಕ್ಕಹುಣಸೂರು ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಿರ್ಸಾಮುಂಡಾ ಆದಿವಾಸಿ ಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಆದಿವಾಸಿಗಳು ಪ್ರತಿಭಟನೆ ನಡೆಸಿದರು.
ಮಂಗಳವಾರ ಭವನದ ಮುಂಭಾಗ ಜಮಾವಣೆಗೊಂಡ ಆದಿವಾಸಿ ಮುಖಂಡರು, ಬಿರ್ಸಾಮುಂಡಾ ಭವನ ನಮ್ಮ ಹಕ್ಕು, ಭವನ ನಿರ್ಮಾಣವಾಗಲಿ, ಆದಿವಾಸಿಗಳ ಆಸೆ ಈಡೇರಲಿ ಎಂಬಿತ್ಯಾದಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, ಎರಡು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಬಿರ್ಸಾಮುಂಡಾ ಆದಿವಾಸಿ ಭವನ ಇಂದಿಗೂ ಪೂರ್ಣಗೊಂಡಿಲ್ಲ. ಅಪೂರ್ಣ ಕಾಮಗಾರಿಯಿಂದಾಗಿ ಕಟ್ಟಡ ದುಸ್ತಿತಿಗೆ ತಲುಪುತಿರುವುದು ಮಾತ್ರವಲ್ಲದೆ, ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಕಟ್ಟಡದ ಕಾಂಪೌಂಡ್ ಕಾಮಗಾರಿ ಸೇರಿದಂತೆ ಸಾಕಷ್ಟು ಕಾಮಗಾರಿಗಳು ಆಗಬೇಕಿದೆ. ಗಿರಿಜನ ಕಲ್ಯಾಣ ಇಲಾಖೆಯ ಬೇಜವಾಬ್ದಾರಿತನದಿಂದಾಗಿ ಕಟ್ಟಡ ಅಪೂರ್ಣವಾಗಿದೆ. ಈ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂಬರುವ ನ.15ರ ಬಿರ್ಸಾಮುಂಡಾ ಜಯಂತಿ ಕಾರ್ಯಕ್ರಮವನ್ನು ಈ ಭವನದಲ್ಲೇ ಆಯೋಜನಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಆದಿವಾಸಿ ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮಾತನಾಡಿ, ಬಿರ್ಸಾ ಮುಂಡಾ ಶಿಲ್ಪ ವಿಗ್ರಹ ಸ್ಥಾಪಿಸುವುದು, ಭವನವು ಆದಿವಾಸಿಗಳ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗೆ ಲಭ್ಯ ಆಗುವಂತೆ ಕ್ರಮ ವಹಿಸುವುದು, ನಗರದಲ್ಲಿ ಒಂದು ಆದಿವಾಸಿ ಹಾಡಿ ನಿರ್ಮಾಣ ಮಾಡಿ ನೂರು ಕುಟುಂಬಗಳು ನಗರ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲು ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಗಿರಿಜನ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್‌ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಅಧ್ಯಕ್ಷೆ ಲಕ್ಷ್ಮೀ, ಬೆಟ್ಟಕುರುಬ ಪಾರಂಪರಿಕ ಸಂಘದ ಮುಖಂಡ ವಿಠಲ್ ನಾಣಚ್ಚಿ, ತಾಲೂಕು ಅರಣ್ಯ ಹಕ್ಕು ಸಮಿತಿಗಳ ಸಂಚಾಲಕ ತೆಕ್ಕಲ ಹಾಡಿ ಶಿವಣ್ಣ, ಮಾನವ ಮಂಟಪದ ಶ್ರೀಕಂಠ, ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಇತರರು ಇದ್ದರು.
ಬಾಕಿಯಿರುವ ಅನುದಾನಕ್ಕಾಗಿ ಪ್ರಸ್ತಾವನೆ: ಈ ಕುರಿತು ವಿಜಯವಾಣಿಯೊಂದಿಗೆ ಗಿರಿಜನ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್ ಮಾತನಾಡಿ, ಒಂದು ಕೋಟಿ ರೂ. ವೆಚ್ಚದಡಿ ಬಿರ್ಸಾಮುಂಡ ಭವನ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಅದಕ್ಕೆ ತಕ್ಕ ಕಾಮಗಾರಿ ಸಂಪೂರ್ಣಗೊಂಡಿದೆ. ಬಾಕಿ ಇರುವ 25 ಲಕ್ಷ ರೂ. ಅನುದಾನ ಬಿಡುಗಡೆಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ದೊರತ ಕೂಡಲೇ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.