

ಮೈಸೂರು: ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಬುಕಟ್ಟು ಕೃಷಿಕರ ಸಂಘ, ಆದಿವಾಸಿ ಗಿರಿಜನ ಮಹಿಳಾ ಸಂಘ, ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ, ಆದಿಜಾಂಬವ ಂಘ, ಡೀಡ್ ಸಂಸ್ಥೆ ನೇತೃತ್ವದಲ್ಲಿ ಆದಿವಾಸಿಗಳು ಪ್ರತಿಭಟನೆ ನಡೆಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನು ವನ್ಯಜೀವಿ ಕಾಯ್ದೆಯಡಿ ಹೊರಹಾಕಿ ನಿಯಮಾನುಸಾರ ಪುನರ್ವಸತಿ ನೀಡದೆ ಆದಿವಾಸಿಗಳನ್ನು ಸಂಕಷ್ಟಕ್ಕೆ ತಳ್ಳಿ 50 ವರ್ಷಗಳು ಕಳೆದಿದೆ. ಈ ಸಂಬಂಧ ಡೀಡ್ ಹಾಗೂ ಬುಡಕಟ್ಟು ಕೃಷಿಕರ ಸಂಘ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಆದಿವಾಸಿಗಳ ಪರವಾಗಿ ತೀರ್ಪು ಬಂದು ದಶಕವೇ ಕಳೆದಿದೆ. ಮುಜಾಫರ್ ಅಸ್ಸಾದಿ ಸಮಿತಿ ನೀಡಿದ ವರದಿಯು ಸಲ್ಲಿಕೆಯಾಗಿ 7 ವರ್ಷಗಳು ಕಳೆದಿದೆ. ಆದರೆ, ಸರ್ಕಾರ ಹೈಕೋರ್ಟ್ ತೀರ್ಪು ಹಾಗೂ ಅಸ್ಸಾದಿ ಸಮಿತಿ ಶಿಫಾರಸನ್ನು ಕಡೆಗಣಿಸಿದೆ ಎಂದು ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ನಿರ್ದೇಶನ ಪ್ರಕಾರ ಕೈಬಿಟ್ಟು ಹೋಗಿರುವ ಉಳಿದ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ತಲಾ 5 ಎಕರೆ ಭೂಮಿ,ಕ 15 ರಿಂದ 20 ಲಕ್ಷ ರೂ. ಪರಿಹಾರ ಪ್ಯಾಕೇಜ್ ನೀಡಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಭೂಮಿ ಹಕ್ಕು ನೀಡಿ ನಮ್ಮ ಪರಂಪರೆ ಉಳಿಸಬೇಕು, ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಡೀಡ್ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್, ದಲಿತ ಮುಖಂಡ ಹರಿಹರ ಆನಂದಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.