'ಮುಖ್ಯವಾಹಿನಿಗೆ ಬರಲು ಬುಡಕಟ್ಟು ಜನರಿಗೆ ಒತ್ತಡ ಸಲ್ಲ '

38
Published on

ಮೈಸೂರು: ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಅವರ ಮೇಲೆ ಒತ್ತಡ ಹಾಕುವ ಕೆಲಸ ಮಾಡಬಾರದು ಎಂದು ಭಾರತೀಯ ಭಾಷಾ ಸಂಸ್ಥಾನದ ಮಾಜಿ ನಿರ್ದೇಶಕ ಪ್ರೊ.ರಾಜೇಶ್ ಸಚ್‌ದೇವ ಹೇಳಿದರು.

ಭಾರತೀಯ ಭಾಷಾ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಬುಡಕಟ್ಟು ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಬುಡಕಟ್ಟು ಜನರ ಜೀವನಕ್ರಮವು ಶಿಸ್ತಿನಿಂದ ಕೂಡಿದ್ದು, ಅಲ್ಲಿನ ಧನಾತ್ಮಕ ಅಂಶಗಳು ಅನುಕರಣೀಯ. ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಒತ್ತಡ ಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು.

ಬುಡಕಟ್ಟು ಜನರಿಗೆ ಜೀವನ ಶೈಲಿಯನ್ನು ನಾವು ಕಲಿಸುತ್ತಿದ್ದೇವೆಯೆಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಅವರು ತಮ್ಮದೇ ಆದ ರಕ್ಷಣೆ, ಶಿಕ್ಷಣ, ಸಂಸ್ಕೃತಿ, ಭಾಷೆ, ಪರಂಪರೆಯನ್ನು ಕಟ್ಟಿ ಬೆಳೆಸಿ ಅದನ್ನು ಶತ, ಶತಮಾನಗಳಿಂದ ಉಳಿಸಿಕೊಂಡು ಬಂದಿದ್ದಾರೆ ಎಂದು ವಿಶ್ಲೇಷಿಸಿದರು.

ಬುಡಕಟ್ಟು ಕುಟುಂಬಗಳಲ್ಲಿ ಆತ್ಮಹತ್ಯೆ ನಡೆದ ವರದಿಗಳಿಲ್ಲ, ಅವರಲ್ಲಿ ಜೀವನದ ಸವಾಲನ್ನು ಎದುರಿಸುವ ಧೈರ್ಯ ಮತ್ತು ಛಲವಿದೆ. ಹೀಗಿದ್ದಾಗ ಅವರಿಗೆ ಹೊಸ ವಿಚಾರ ಕಲಿಸುವುದು ಒಳಿತೋ ಅಥವಾ ಅವರ ಜೀವನವನ್ನು ಆನಂದಿಸಲು ಬಿಡುವುದು ಉತ್ತಮವೋ ಎಂಬುದರ ಬಗ್ಗೆ ಅವಲೋಕಿಸಬೇಕಿದೆ ಎಂದರು.

ಕುಟುಂಬಗಳಲ್ಲಿ ಜಾತಿ, ಧರ್ಮದ ಕಟ್ಟುಪಾಡಿಲ್ಲ. ಎಲ್ಲರೂ ಒಂದಾಗಿ ಅವರು ಬದುಕುತ್ತಾರೆ. ಅಂಬೇಡ್ಕರ್ ಅವರ ಚಿಂತನೆಯ ಸಮಾಜ ಸಂವಿಧಾನ ಜಾರಿಗೂ ಮೊದಲೇ ಬುಡಕಟ್ಟು ಜನರಲ್ಲಿತ್ತು ಎಂದು ಬಣ್ಣಿಸಿದರು.

ಸಂವಿಧಾನ ಸೂಚಿಸುವ ಅಂಶಗಳನ್ನು ತಮಗೆ ಅರಿವಿಲ್ಲದಂತೆ ಆಚರಣೆ ಮಾಡುತ್ತಿದ್ದಾರೆ. ನಮ್ಮೊಂದಿಗಿನ ಸಮೀಕರಣವು ಅವರಿಗೆ ಅನೇಕ ಬಾರಿ ಕಿರಿಕಿರಿ ಉಂಟು ಮಾಡುತ್ತದೆ. ಹೀಗಾಗಿ ಅವರ ಜತೆಗಿದ್ದು ಕೆಲಸ ಮಾಡುವುದನ್ನು ನಾವು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮುದಾಯದೊಂದಿಗೆ ಕೆಲಸ ಮಾಡುವಾಗ ಅಲ್ಲಿನ ಸೂಕ್ಷ್ಮತೆಗಳ ಬಗ್ಗೆ ಎಚ್ಚರದಿಂದಿರಬೇಕು. ಭಾರತದ ಪ್ರತಿಯೊಂದು ಬುಡಕಟ್ಟು ಸಮುದಾಯದಲ್ಲೂ ಅನೇಕ ಕಥೆಗಳಿವೆ. ಅದರ ಸ್ವಾರಸ್ಯವನ್ನು ತಿಳಿಯುವ ಕೆಲಸವಾಗಬೇಕು ಎಂದು ಹೇಳಿದರು.

ಬುಡಕಟ್ಟು ಭಾಷೆ ಮತ್ತು ಸಂಸ್ಕೃತಿ ಉಳಿಸಲು ಅವರ ಜತೆಗಿದ್ದು ಕೆಲಸ ಮಾಡಬೇಕು. ಅಲ್ಲಿನ ಭಾಷೆಗಳು ಪ್ರಕೃತಿಯೊಂದಿಗೆ ಹೆಣೆದುಕೊಳ್ಳುತ್ತವೆ, ಇಂತಹ ಶ್ರೀಮಂತ ಭಾಷೆಗಳ ಬಗ್ಗೆ ಅಧ್ಯಯನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಜ್ಞಾನದ ವಿಸ್ತಾರವಾಗಲು ಬಹು ಭಾಷೆಯ ಕಲಿಕೆ ಅಗತ್ಯ. ಮಾತೃಭಾಷೆಯ ಕಲಿಕೆಗೆ ಸ್ವಾತಂತ್ರ್ಯದೊಂದಿಗೆ ಇತರ ಭಾಷೆಗಳನ್ನೂ ಕಲಿಸಬೇಕಿದೆ. ಬುಡಕಟ್ಟು ಸಮುದಾಯದ ಮಕ್ಕಳೂ ಬಹುಭಾಷೆಯನ್ನು ಕಲಿತರೆ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಯಬಹುದು ಎಂದರು.

ಸಂಸ್ಥೆಯ ನಿರ್ದೇಶಕ ಶೈಲೇಂದ್ರ ಮೋಹನ್, ಉಪ ನಿರ್ದೇಕರಾದ ಪ್ರೊ.ಪಿ.ಆರ್.ಫರ್ನಾಂಡಿಸ್, ಪ್ರೊ.ಉಮಾರಾಣಿ ಪಾಪುಸ್ವಾಮಿ, ಕಾರ್ಯಕ್ರಮ ಸಂಯೋಜಕ ಸುಜೋಯ್ ಸರ್ಕಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net