ಗಮನ ಸೆಳೆದ ಗಿರಿಜನ ಉತ್ಸವ

mysore
Published on

ಮೈಸೂರು: ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವ ಗಮನ ಸೆಳೆಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆದಿವಾಸಿಗಳ ಸಂಸ್ಕೃತಿ ಅನಾವರಣಗೊಂಡಿತು.


ಕಲಾಮಂದಿರದ ದ್ವಾರದಿಂದ ಕಿರುರಂಗಮಂದಿರ ಸಭಾಂಗಣದವರೆಗೆ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ಬಳಿಕ ಯಲ್ಲಾಪುರದ ಲಿಲ್ಲಿ ಮತ್ತು ತಂಡದವರು ಡಮಾಮಿ ನೃತ್ಯವನ್ನು ಈ ಭಾಗದ ಜನರಿಗೆ ಪರಿಚಯಿಸಿದರು.

ಎಚ್.ಡಿ.ಕೋಟೆಯ ಪೆಂಜಳ್ಳಿ ಕಾಲನಿಯ ರಮೇಶ್ ತಂಡದವರು ಕರಡಿ ಕುಣಿತ, ನಂಜನಗೂಡು ತಾಲೂಕಿನ ಕಳಲೆ ಗ್ರಾಮದ ಆರ್.ಪ್ರತಾಪ್ ತಂಡದವರು ಕೊಂಬು ಕಹಳೆ, ತಲಕಾಡಿನ ರಾಜಶೇಖರ್ ತಂಡದವರು ಚಿಲಿಪಿಲಿ ಗೊಂಬೆ ಪ್ರದರ್ಶನದೊಂದಿಗೆ ಸಭಿಕರನ್ನು ರಂಜಿಸಿದರು.


ನಾಣಚ್ಚಿಗದ್ದೆ ಹಾಡಿಯ ರಮೇಶ್ ತಂಡದವರ ಅಡಲೇಮರ ನೃತ್ಯ ವಿಶೇಷವಾಗಿ ಮೂಡಿಬಂತು. ಎಚ್.ಡಿ.ಕೋಟೆಯ ಚಲ್ಲನ್ ತಂಡದವರು ಬೆಟ್ಟಕುರುಬ ಸಾಂಪ್ರದಾಯಿಕ ನೃತ್ಯವನ್ನು ಸೊಗಸಾಗಿ ಪ್ರಸ್ತುತ ಪಡಿಸಿದರು. ಮೈಸೂರಿನ ರಮ್ಯಾ ತಂಡದವರು ಡೊಳ್ಳುಕುಣಿತ, ರಾಜೇಶ್ವರಿ ತಂಡದವರು ಭಕ್ತಿಸಂಗೀತ, ಎಚ್.ಡಿ.ಕೋಟೆಯ ಜವರನಾಯಕ ತಂಡದವರು ಜಾನಪದ ಗೀತಗಾಯನ, ಕಳಲೆ ಗ್ರಾಮದ ದೇವಣ್ಣ ತಂಡದವರು ತತ್ವಪದ, ದೊಡ್ಡಮಾರನಹಳ್ಳಿಯ ಡಿ.ಕೆ.ಲೋಕೇಶ್ ತಂಡದವರು ಸುಗಮ ಸಂಗೀತವನ್ನು ಪ್ರಸ್ತುತ ಪಡಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇದ್ದರು. ಮೆರವಣಿಗೆಗೆ ಚಾಲನೆ ನೀಡಿ ಶಾಸಕ ಕೆ.ಹರೀಶ್‌ಗೌಡ ನಿರ್ಗಮಿಸಿದರು.

ಉಳಿದಂತೆ ಆಮಂತ್ರಣ ಪತ್ರದಲ್ಲಿ ಹೆಸರು ನಮೂದಿಸಿರುವ ಎಲ್ಲ ಗಣ್ಯರು, ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಗೈರಾಗಿದ್ದರು.


ಜತೆಗೆ, ಸಭಿಕರ ಕೊರತೆಯೂ ತೀವ್ರವಾಗಿ ಕಾಡಿತ್ತು. ಕಿರುರಂಗಮಂದಿರದಲ್ಲಿ 15-20 ಸಭಿಕರು ಮಾತ್ರ ಇದ್ದರು. ಹೀಗಾಗಿ, ಬಹುತೇಕ ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net