

ವಿಜಯಪುರ: ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ವ್ಯಕ್ತಿಗಳ ಚರಿತ್ರೆಗಳ ಕುರಿತು ಯುವ ಜನತೆ ಅರಿತುಕೊಳ್ಳಬೇಕೆಂದು ಎಬಿವಿಪಿಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಹೇಳಿದರು.
ನಗರದಲ್ಲಿ ಸ್ವಾತಂತ್ರೃ ದಿನಾಚರಣೆ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರೃಕ್ಕಾಗಿ ಅನೇಕ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ತ್ಯಾಗ-ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರೃ ಸಿಕ್ಕಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಭಾರತೀಯನ ಕರ್ತವ್ಯ ಎಂದರು.
ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟೀಯ ವಿಚಾರಧಾರೆಯನ್ನು ತುಂಬುವ ಕಾರ್ಯ ಎಬಿವಿಪಿ ಮಾಡಿಕೊಂಡು ಬರುತ್ತಿದೆ. ನಮ್ಮ ದೇಶ, ನಮ್ಮ ದೇಶದ ಧ್ವಜಕ್ಕೆ ಗೌರವ ಸೂಚಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಬೇಕು. ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಿ ಬಲಿದಾನಗೈದ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು. ದೇಶ ಮೊದಲು ಎನ್ನುವ ಸಂಕಲ್ಪವನ್ನು ಮಾಡಬೇಕು ಎಂದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಜಿಲ್ಲಾ ಪ್ರಮುಖ ಎಂ.ಎಸ್. ಬಿರಾದಾರ, ನಗರ ಅಧ್ಯಕ್ಷ ಸುಮಾ ಬೋಳರಡ್ಡಿ, ಸಂಜೀವ ಕುಲಕರ್ಣಿ, ಮಲ್ಲಿಕಾರ್ಜುನ ಮಾಳಿ, ಮಂಜುನಾಥ ಹಳ್ಳಿ, ಸಂದೀಪ ಅರಳಗುಂಡಿ, ಶಿವನಗೌಡ ಬಿರಾದಾರ, ಸುರೇಖಾ ಕುಲಕರ್ಣಿ, ರೇಖಾ ಮಾಳಿ, ಸುಜ್ಞೆತ ಕುಲಕರ್ಣಿ, ಪ್ರವೀಣ ಬಿರಾದಾರ, ಐಶ್ವರ್ಯ ಅಸಂಗಿ, ಶ್ರೀಕಾಂತ, ಅಭಿಷೇಕ ಬಿರಾದಾರ ಮತ್ತಿತರರಿದ್ದರು.
ಶಿವಾಜಿ ವೃತ್ತದಿಂದ ಆರಂಭಗೊಂಡ ತಿರಂಗ ಯಾತ್ರೆ ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಸಿದ್ಧೇಶ್ವರ ದೇವಸ್ಥಾನದವರೆಗೆ ಸಾಗಿ ಬಂತು. ನೂರಾರು ವಿದ್ಯಾರ್ಥಿಗಳು ತಿರಂಗ ಹಿಡಿದು ಜಯಘೋಷ ಹಾಕಿದರು.