ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ..

Electric Bus
Published on

ಬೆಂಗಳೂರು: ಪರಿಸರ ರಕ್ಷಣೆ ದೃಷ್ಟಿಯಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿದ್ದು, ಅದರ ಭಾಗವಾಗಿ ಖಾಸಗಿ ಸಂಸ್ಥೆ ನೀಡಿರುವ ಒಂದು ಬಸ್​ನ ಪ್ರಾಯೋಗಿಕ ಸಂಚಾರಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಚಾಲನೆ ನೀಡಿದರು.

ನಂತರ ಲಕ್ಷ್ಮಣ ಸವದಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿ ಹಲವು ಅಧಿಕಾರಿಗಳ ಜತೆ ಶಾಂತಿನಗರದಿಂದ ವಿಧಾನಸೌಧವರೆಗೆ ನೂತನ ಬಸ್​ನಲ್ಲಿ ಸಂಚರಿಸಿದರು. ವಿಧಾನಸೌಧದ ಆವರಣದಲ್ಲಿ ಬಸ್ ಒಂದು ಸುತ್ತು ಹಾಕಿದ್ದು ವಿಶೇಷ. ವಿಧಾನಸೌಧಕ್ಕೆ ಬರುತ್ತಿದ್ದಂತೆ ಚಾಲಕನ ಆಸನದಲ್ಲಿ ಕುಳಿತ ಲಕ್ಷ್ಮಣ ಸವದಿ, ಬಿಎಂಟಿಸಿ ಮತ್ತು ಬಸ್ ಮಾಲೀಕತ್ವ ಸಂಸ್ಥೆಯ ಅಧಿಕಾರಿಗಳಿಂದ ಬಸ್ ಕುರಿತು ಮಾಹಿತಿ ಪಡೆದರು.

ರಾಜ್ಯ- ಕೇಂದ್ರ ಸರ್ಕಾರಗಳ ಪಾಲುದಾರಿಕೆ: ಕೇಂದ್ರ ಸರ್ಕಾರದ ‘ಫೇಮ್ ಇಂಡಿಯಾ- 2’ ಯೋಜನೆಯಡಿ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್​ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತಿದೆ. ಅದರ ಭಾಗವಾಗಿ ಒಲೆಕ್ಟ್ರಾ ಗ್ರೀನ್​ಟೆಕ್ ಸಂಸ್ಥೆಯು ಎಲೆಕ್ಟ್ರಿಕ್ ಬಸ್ ನೀಡಿದೆ. ಅದರ ಕಾರ್ಯಕ್ಷಮತೆ, ಗುಣಮಟ್ಟವನ್ನು ಪರೀಕ್ಷಿಸಲಾಯಿತು.

ಮುಂದಿನ 30 ದಿನಗಳ ಕಾಲ ಈ ವಿದ್ಯುತ್ ಬಸ್ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿದೆ. ಪ್ರತಿ ಬಸ್​ಗೆ ಕೇಂದ್ರ ಸರ್ಕಾರ 55 ಲಕ್ಷ ರೂ. ಮತ್ತು ರಾಜ್ಯ ಸರ್ಕಾರ ರೂ.33.33 ಲಕ್ಷ ರೂ. ನೀಡಲಿದೆ. ಒಟ್ಟು 88.33 ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬಿಎಂಟಿಸಿಯಷ್ಟೇ ಅಲ್ಲದೆ, ಕೆಎಸ್ಸಾರ್ಟಿಸಿ ಮತ್ತು ಎನ್​ಇಕೆಆರ್​ಟಿಸಿಗೂ ತಲಾ 50 ವಿದ್ಯುತ್ ಬಸ್​ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಸ್ಮಾರ್ಟ್​ಸಿಟಿ ಯೋಜನೆಯಡಿ ಬಿಎಂಟಿಸಿಗೆ ಹೆಚ್ಚುವರಿಯಾಗಿ 90 ಮಿನಿ ವಿದ್ಯುತ್ ಬಸ್ ಖರೀದಿಸಲಾಗುತ್ತದೆ.

ಶ್ಲಾಘಿಸಿದ ಸಿಎಂ: ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಲಕ್ಷ್ಮಣ ಸವದಿ ಮತ್ತು ಬಿಎಂಟಿಸಿ ಅಧಿಕಾರಿಗಳ ಕ್ರಮವನ್ನು ಮುಖ್ಯಮಂತ್ರಿ ಬಿಎಸ್​ವೈ ಶ್ಲಾಘಿಸಿದರು.

ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಪಡೆಯುತ್ತಿರುವುದರಿಂದ ನಿಗಮಕ್ಕೆ ಹೊರೆಯಾಗುವುದಿಲ್ಲ. ಕಿ.ಮೀ. ಲೆಕ್ಕದಲ್ಲಿ ಬಸ್ ಪೂರೈಸುವ ಸಂಸ್ಥೆಗೆ ಹಣ ಪಾವತಿಸಲಾಗುವುದು. ಸರ್ಕಾರಗಳ ಸಹಯೋಗದಲ್ಲಿ ಬಸ್ ಪಡೆಯಲಾಗುತ್ತಿದೆ.

| ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ

ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ಬಸ್​ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಸದ್ಯ ಒಂದು ಬಸ್ ಪ್ರಾಯೋಗಿಕ ಸಂಚಾರಕ್ಕೆ ಪಡೆಯಲಾಗಿದ್ದು, ಸಮರ್ಪಕವಾಗಿದ್ದರೆ ಇನ್ನಷ್ಟು ಬಸ್​ಸೇರ್ಪಡೆ ಮಾಡಲಾಗುವುದು. | ಲಕ್ಷ್ಮಣ ಸವದಿ ಸಾರಿಗೆ ಸಚಿವ

ಬಸ್​ನ ವಿಶೇಷತೆಗಳು

  • ಹವಾನಿಯಂತ್ರಿತ ವ್ಯವಸ್ಥೆ
  • 12 ಮೀ. ಉದ್ದ, ಫ್ಲೋರ್ ಎತ್ತರ 400 ಮಿ.ಮೀ.
  • 34+1 ಆಸನದ ವ್ಯವಸ್ಥೆ
  • ಆಟೋಮ್ಯಾಟಿಕ್ ಗೇರ್, ಮುಂದೆ ಮತ್ತು ಹಿಂದೆ ಡಿಸ್ಕ್ ಬ್ರೇಕ್ ಹಾಗೂ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್
  • ಒಮ್ಮೆ ಚಾರ್ಜ್ ಮಾಡಿದರೆ 200ರಿಂದ 250 ಕಿ.ಮೀ. ಪ್ರಯಾಣ
  • 2ರಿಂದ 3 ಗಂಟೆ ಫಾಸ್ಟ್ ಚಾರ್ಜಿಂಗ್ ಸೌಕರ್ಯ
  • ಹಿರಿಯ ನಾಗರಿಕರು ಮತ್ತು ಅಂಗವಿಕಲರ ಅನುಕೂಲಕ್ಕಾಗಿ ಫೋಲ್ಡಿಂಗ್ ಸ್ಟೆಪ್, ನಿಲಿಂಗ್ ಮೆಕ್ಯಾನಿಸಂ ವ್ಹೀಲ್ ಚೇರ್ ಅಳವಡಿಕೆ
  • ಬಸ್ ಒಳಗೆ ಮೊಬೈಲ್ ಚಾರ್ಜಿಂಗ್, ತುರ್ತು ಅಲಾರಂ, ತುರ್ತು ನಿಲುಗಡೆ ಬಟನ್, ತುರ್ತು ನಿರ್ಗಮನ ವ್ಯವಸ್ಥೆ
  • ಪ್ರಯಾಣಿಕರು ಅನಾರೋಗ್ಯಕ್ಕೊಳಗಾದರೆ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಮಾದರಿ ಸೈರನ್ ವ್ಯವಸ್ಥೆ
  • ಪೊಲೀಸ್, ಅಗ್ನಿಶಾಮಕ ದಳ, ಆಂಬುಲೆನ್ಸ್​ಗಳ ಅವಶ್ಯಕತೆ ಇದ್ದರೆ ಕರೆ ಕರೆ ಮಾಡುವ ವ್ಯವಸ್ಥೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net