

ನರೇಗಲ್ಲ: ಸಮೀಪದ ಬೂದಿಹಾಳ ಗ್ರಾಮಸ್ಥರು ಶ್ರೀಶೈಲ ಕ್ಷೇತ್ರಕ್ಕೆ ಸತತ 23ನೇ ವರ್ಷದ ಪಾದಯಾತ್ರೆಯನ್ನು ಶುಕ್ರವಾರ ಪ್ರಾರಂಭಿಸಿದರು. ಯುಗಾದಿಯಂದು ಜರುಗುವ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪಾಲ್ಗೊಳ್ಳಲು ನೂರಾರು ಶಿವಭಕ್ತರು ಶ್ರೀ ಕಲ್ಮೇಶ್ವರ ಭಕ್ತಮಂಡಳಿಯೊಂದಿಗೆ 12 ದಿನಗಳ ಪಾದಯಾತ್ರೆ ಕೈಗೊಂಡರು. ಬೆಳಗ್ಗೆ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ಭಕ್ತರು ವಿಶೇಷ ಪೂಜೆ ಕೈಗೊಂಡರು. ಬೂದಿಹಾಳ, ಮಾಳವಾಡ, ಕುರಹಟ್ಟಿ, ತುಪ್ಪದ ಕುರಹಟ್ಟಿ, ತೊಂಡಿಹಾಳ, ಅಬ್ಬಿಗೇರಿ, ಹಾಲಕೆರೆ, ನೀರಲಗಿ ಗ್ರಾಮ ಸೇರಿ ಸುತ್ತಲಿನ ಊರುಗಳಿಂದ 100ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಪಾದಯಾತ್ರಿ ಬಸವನಗೌಡ ಪಾಟೀಲ ಮಾತನಾಡಿ, ಸತತ 23 ವರ್ಷಗಳಿಂದ ಗ್ರಾಮದ ಕಲ್ಲಯ್ಯಜ್ಜ ಹಿರೇಮಠ ಇವರ ನೇತೃತ್ವದಲ್ಲಿ ನಾವುಗಳು ಶ್ರೀಶೈಲ ಮಲ್ಲಯ್ಯನ ಪಾದಯಾತ್ರೆ ಮಾಡುತ್ತಾ ಬಂದಿದ್ದೇವೆ. ಕಲ್ಲಯ್ಯಜ್ಜ ಹಿರೇಮಠ ನೇತೃತ್ವ ವಹಿಸಿದ್ದಾರೆ. ಮಾ. 26ರಂದು ಯಾತ್ರೆ ಶ್ರೀಶೈಲ ತಲುಪಲಿದೆ ಎಂದರು.