

ಹಲಗೂರು: ಸಮೀಪದ ಗೊಲ್ಲರಹಳ್ಳಿ ಗ್ರಾಮದ ಶ್ರೀ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ, ಮರಿಗೌಡನ ದೊಡ್ಡಿ, ಗಾಣಾಳು ಮತ್ತುಹಲಗೂರು ಸೇರಿದಂತೆ ಮಾದಪ್ಪನ ಸಾವಿರಾರು ಭಕ್ತಾದಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭಾನುವಾರ ಬೆಳಗ್ಗೆ ಮುಂಜಾನೆ ಪಾದಯಾತ್ರೆ ಆರಂಭಿಸಿದರು.
ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹದೇವು ಮಾತನಾಡಿ, ನಾವು ಪುರಾತನ ಕಾಲದಿಂದಲೂ ನಮ್ಮ ಗ್ರಾಮಸ್ಥರು, ಊರಿನ ಯಜಮಾನರು, ಮುಖಂಡರು ಹಾಗೂ ಅಕ್ಕ ಪಕ್ಕದ ಗ್ರಾಮದವರೆಲ್ಲರೂ ಸೇರಿ ಪ್ರತಿ ವರ್ಷವೂ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದೇವೆ. ಸಕಾಲಕ್ಕೆ ಮಳೆಯಾಗಿ ರೈತರು ಸಮೃದ್ಧಿಯಿಂದ ಜೀವನ ನಡೆಸಲಿ ಉದ್ದೇಶ ಇಟ್ಟುಕೊಂಡು ನಾವು ಮಾದಪ್ಪನ ದರ್ಶನವನ್ನು ಪಡೆಯಲು ಪಾದಯಾತ್ರೆ ಮಾಡಿಕೊಂಡು ಬರುತ್ತಿದ್ದೇವೆ. ಇದರಲ್ಲಿ ವೃದ್ಧರು, ಯುವಕರು-ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಎಲ್ಲರೂ ಸೇರಿ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.
ಪ್ರತಿ ವರ್ಷವೂ ನಮ್ಮ ಮಾದಪ್ಪನ ಪಾದಯಾತ್ರೆಯಲ್ಲಿ ಹೆಚ್ಚೆಚ್ಚು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದರು.
ಪಾದಯಾತ್ರೆಯಲ್ಲಿ ಹೊರಟ ಭಕ್ತಾದಿಗಳು ಕಂಸಾಳೆ ಬಾರಿಸುತ್ತಾ ಮಹದೇಶ್ವರ ಸ್ವಾಮಿಯದೇವರ ಸತ್ತಿಗೆ ಹೊತ್ತು ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಿಗುವ ಗ್ರಾಮದವರು ತಮ್ಮ ಕಾಣಿಕೆಗಳನ್ನು ನೀಡಿ ಕೈಮುಗಿದು ಅವರನ್ನು ಬೀಳ್ಕೊಡುತ್ತಿದ್ದರು. ಭಕ್ತಾದಿಗಳು ಮಾದಪ್ಪನ ಬಗ್ಗೆ ಹಾಡುಗಳನ್ನು ಹಾಡುತ್ತಾ ತಮ್ಮ ಆಯಾಸ ಮರೆಯುವುದಕ್ಕಾಗಿ ಉಘೇ ಮಾದಪ್ಪ ಎಂಬ ಘೋಷಗಳನ್ನು ಕೂಗುತ್ತಿದ್ದರು.