

| ಭರತ್ ಶೆಟ್ಟಿಗಾರ್ ಮಂಗಳೂರು
ಪಶ್ಚಿಮ ಘಟ್ಟ ಹಾಗೂ ತಪ್ಪಲಿನ ವಿವಿಧ ಬೆಟ್ಟ-ಗುಡ್ಡಗಳಿಗೆ ಚಾರಣ ಮಾಡುವವರಿಗಾಗಿ ಪ್ರತ್ಯೇಕ ಟ್ರೆಕಿಂಗ್ ರೂಟ್ ರಚಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಘಟ್ಟದ ಚಾರಣ ಎಷ್ಟು ಖುಷಿ ನೀಡುತ್ತದೆಯೋ ಅಷ್ಟೇ ಅಪಾಯಕಾರಿಯೂ ಆಗಿದೆ. ದಟ್ಟ ಕಾಡಿನ ಮಧ್ಯದಲ್ಲಿ ಸಾಗುವಾಗ ದಾರಿ ತಪ್ಪಿದರೆ ಮತ್ತೆ ಟ್ರ್ಯಾಕ್‌ಗೆ ಮರಳುವುದು ಅಷ್ಟು ಸುಲಭವಲ್ಲ. ಈ ಅಪಾಯ ದೂರವಾಗಿಸುವ ಮೂಲಕ, ಜವಾಬ್ದಾರಿಯುತ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಚಾರಣಿಗರಿಗಾಗಿಯೇ ಟ್ರೆಕಿಂಗ್ ರೂಟ್ ನಿರ್ಮಿಸಲು ಉದ್ದೇಶಿಸಿದೆ.
ಅದರಂತೆ ಸುಬ್ರಹ್ಮಣ್ಯದಲ್ಲಿ ಕೊಲ್ಲಮೊಗ್ರು, ಪಂಜದ ಬಂಟಮಲೆ, ಬಂಟ್ವಾಳದ ವೀರಕಂಬ, ಕಾರಿಂಜೇಶ್ವರದಲ್ಲಿ ಎರಡು ಚಾರಣ ಹಾದಿ, ಬೆಳ್ತಂಗಡಿಯ ಗಡಾಯಿಕಲ್ಲು ಸೇರಿದಂತೆ ವಿವಿಧೆಡೆ ಟ್ರೆಕ್ಕಿಂಗ್ ಹಾದಿಗಳನ್ನು ಅಂತಿಮಗೊಳಿಸಲಾಗುತ್ತಿದೆ. ಈ ಪ್ರದೇಶಗಳ ಸಸ್ಯ ಮತ್ತು ಪ್ರಾಣಿ ಸಂಪತ್ತು ಶ್ರೀಮಂತವಾಗಿದ್ದು, ವಿವಿಧ ರೀತಿಯ ಹಕ್ಕಿಗಳ ವಾಸಸ್ಥಾನವೂ ಆಗಿದೆ. ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಈ ಪಟ್ಟಿಯನ್ನು ಅಂತಿಮಗೊಳಿಸಿ, ಬಿಡುಗಡೆಗೊಳಿಸಲಿದೆ. ಈ ಮೊದಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯೂ, ಇಂತಹುದೇ ಯೋಜನೆ ಅನುಷ್ಠಾನಕ್ಕೆ ಉದ್ದೇಶಿತ್ತು. ಆದರೆ ಅದು ಕಾರ್ಯಗತಗೊಂಡಿಲ್ಲ.
ಏನಿದು ಚಾರಣ ಹಾದಿ?: ಎಲ್ಲೆಂದರಲ್ಲಿ ಪಶ್ಚಿಮ ಘಟ್ಟದ ಕಾಡುಗಳ ಒಳಗೆ ಹೋಗುವಂತಿಲ್ಲ. ಇದು ಅಪರಾಧವಾಗಿದ್ದು, ಅರಣ್ಯ ಇಲಾಖೆ ಸಹಕಾರ ಪಡೆದೇ ಹೋಗಬೇಕು. ಚಾರಣಕ್ಕೆ ಯೋಗ್ಯವಾದ ಗುಡ್ಡ-ಬೆಟ್ಟಗಳನ್ನು ಗುರುತಿಸಿ ಅಲ್ಲಿಗೆ ತೆರಳಲು ದಾರಿ ಮಾಡಿಕೊಡುವುದು ಯೋಜನೆ ಉದ್ದೇಶ. ಟ್ರೆಕ್ಕಿಂಗ್ ಬೇಸ್‌ನಲ್ಲಿ ಚಾರಣ ಮಾಡುವ ಎಲ್ಲರ ವಿವರಗಳನ್ನು ಪಡೆದು ಇಂತಿಷ್ಟು ಎಂದು ದರ ವಿಧಿಸಿ ಒಳಗೆ ಬಿಡಲಾಗುತ್ತದೆ. ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ತರಬೇತಿ ನೀಡಿ ಅಥವಾ ಮಂಡಳಿಯಿಂದ ತರಬೇತಿ ಪಡೆದ ಗೈಡ್‌ಗಳನ್ನು ನಿಯೋಜಿಸಲಾಗುತ್ತದೆ. ಅವರೇ ಚಾರಣಿಗರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಹೀಗೆ ಮಾಡುವುದರಿಂದ ಟ್ರೆಕ್ಕಿಂಗ್ ಎಂದು ಎಲ್ಲೆಂದರಲ್ಲಿ ಕಾಡಿನೊಳಗೆ ಪ್ರವೇಶಿಸಿ, ಪ್ಲಾಸ್ಟಿಕ್ ಬಾಟಲ್, ಚೀಲ, ತಿಂಡಿ ಪೊಟ್ಟಣಗಳನ್ನು ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದನ್ನೂ ತಡೆಯಬಹುದಾಗಿದೆ.
ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಇಂತಹುದೊಂದು ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಚಾರಣ ಹಾದಿಯನ್ನು ಅಂತಿಮಗೊಳಿಸಿ ಮಂಡಳಿಗೆ ಸಲ್ಲಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅವರು ರಚಿಸಲಿದ್ದಾರೆ. ಅನಧಿಕೃತವಾಗಿ ಅರಣ್ಯದೊಳಗೆ ಪ್ರವೇಶಿಸಿ ಚಾರಣ ಮಾಡುವುದನ್ನು ತಡೆಯುವ ಉದ್ದೇಶವೂ ಇದರ ಹಿಂದಿದೆ.| ಡಾ.ದಿನೇಶ್ ಕುಮಾರ್ ವೈ.ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು
ಅರಿವಿಲ್ಲದೆ ಚಾರಣ: ಚಾರಣಕ್ಕೆ ಬರುವವರ ಪೈಕಿ ಶೇ.50ರಷ್ಟು ಮಂದಿಗೆ ಮಾತ್ರ ಸರಿಯಾದ ದಾರಿ ಗೊತ್ತಿರುತ್ತದೆ ಅಥವಾ ಚಾರಣ ಸಂಸ್ಥೆಯೊಂದಿಗೆ, ಅನುಭವಿ ಚಾರಣಿಗರೊಂದಿಗೆ ಬರುತ್ತಾರೆ. ಉಳಿದವರು ಗೂಗಲ್ ಮ್ಯಾಪ್, ಇತರರು ಬರೆದಿರುವ ಬ್ಲಾಗ್, ಪತ್ರಿಕಾ ಲೇಖನ, ವೆಬ್‌ಸೈಟ್ ನೋಡಿ ಬರುತ್ತಾರೆ. ಇದರಿಂದ ಶೇ.90ರಷ್ಟು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಪಶ್ಚಿಮ ಘಟ್ಟದ ಕಾಡಿನಲ್ಲಿ ದಾರಿ ತಪ್ಪುವುದು ಜೀವಕ್ಕೇ ಕುತ್ತು ತಂದಂತೆ. ದಾರಿ ತಪ್ಪಿದವರನ್ನು ಪತ್ತೆ ಮಾಡುವುದೂ ಸುಲಭವಲ್ಲ. ವರ್ಷದಲ್ಲಿ ಒಂದೆರಡು ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ.