

ಹನೂರು: ತಾಲೂಕಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲು ಫೆ.16 ರಂದು ರಾಮಾಪುರದಿಂದ ಸಚಿವ ಸಂಪುಟ ಸಭೆ ನಡೆಯುವ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್ ಖಾನ್ ತಿಳಿಸಿದರು.
ಹನೂರು ತಾಲೂಕು ರಚನೆಯಾಗಿ 6 ವರ್ಷ ಕಳೆದಿದೆ. ಆದರೆ ತಾಲೂಕಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಕಚೇರಿಗಳು ಇಲ್ಲ. ಇದರಿಂದ ಜನರ ಕೆಲಸ ಕಾರ್ಯಗಳಿಗಾಗಿ ತೊಂದರೆ ಪಡುವಂತಾಗಿದೆ. ಆದ್ದರಿಂದ ಮಿನಿ ವಿಧಾನಸೌಧ ನಿರ್ಮಿಸಿ ಕಚೇರಿಗಳನ್ನು ತೆರೆಯಬೇಕು. ತಾಲೂಕಿನಲ್ಲಿ 12 ಪಶು ಆಸ್ಪತ್ರೆಗಳಿದ್ದು, ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಬೇಕು. ಉಡುತೊರೆ, ಕೀರೆಪಾತಿ ಹಾಗೂ ಮಿನ್ನತ್ತುಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನ್ಯಾಯಾಲಯ, ಬಸ್ ಡಿಪೋ ಸ್ಥಾಪನೆಯಾಗಬೇಕು. ಹದಗೆಟ್ಟಿರುವ ರಸ್ತೆಗಳು ಅಭಿವೃದ್ಧಿಯಾಗಬೇಕು. ಅರಣ್ಯ ಪ್ರದೇಶದ ಅಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಕೂಡಲೂರಿನಲ್ಲಿ ಪದವಿ ಪೂರ್ವ ಕಾಲೇಜು ತೆರೆಯಬೇಕು. ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ರಾಮಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ತಲೆದೋರುವ ನೀರಿನ ಸಮಸ್ಯೆ ಬಗೆಹರಿಯಬೇಕು. ಇನ್ನು ಕೆಲವು ಅಗತ್ಯ ಮೂಲ ಸೌಕರ್ಯ ಒದಗಿಸುವ ಸಂಬಂಧ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪಾರಂಪರಿಕ ಅರಣ್ಯ ವಾಸಿಗಳಿಗೆ ಸಮರ್ಪಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಕೇಂದ್ರ ಸರ್ಕಾರ 2012ರಲ್ಲೇ ಆದೇಶಿಸಿದೆ. ಆದರೆ ಈ ಕೆಲಸ ಕಾರ್ಯಗತವಾಗಿಲ್ಲ. ಹಾಗೆಯೇ ಇನ್ನು ಅನೇಕ ಬೇಡಿಕೆ ಸಂಬಂಧ ಪಾದಯಾತ್ರೆ ಕೈಗೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹಾಗೆಯೇ ಫೆ.13 ರಂದು ಮೈಸೂರಿನ ಟೌನ್‌ಹಾಲ್ ಆವರಣದಲ್ಲಿ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ನೆನಪಿನ ಕಾರ್ಯಕ್ರಮಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿದ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಕುರಿತ ಮನವಿ ಪತ್ರವನ್ನು ಸರ್ಕಾರಕ್ಕೆ ರವಾನಿಸುವಂತೆ ಗ್ರೇಡ್2 ತಹಸೀಲ್ದಾರ್ ಧನಂಜಯ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾ ಉಪಾಧ್ಯಕ್ಷ ಲೋಕೇಶ್‌ಗೌಡ, ಸಂಘಟನಾ ಕಾರ್ಯದರ್ಶಿ ಶಕ್ತಿವೇಲು, ಪದಾಧಿಕಾರಿಗಳಾದ ವೆಂಕಟೇಶ್, ಶಿವಣ್ಣ, ನಾಗರಾಜು, ಶಿವಲಿಂಗೇಗೌಡ, ರಾಮೇಗೌಡ ಹಾಗೂ ಇನ್ನಿತರರು ಇದ್ದರು.