ಬೇಸಗೆ ತನಕ ಇಲ್ಲ ಚಾರಣ ಅವಕಾಶ, ಅರಣ್ಯ ಇಲಾಖೆ ಮಹತ್ವದ ಆದೇಶ

western ghats
Published on

ಶ್ರವಣ್ ಕುಮಾರ್ ನಾಳ ಪುತ್ತೂರು

ಮಳೆಗಾಲ ಬಂತೆಂದರೆ ಸಾಕು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಲ್ಲಿರುವ ಚಾರಣಿಗರ ಪ್ರಯಾಣ ಪಶ್ಚಿಮಘಟ್ಟದತ್ತ ಸಾಗುತ್ತದೆ. ಆದರೆ ಈ ಬಾರಿ ಇಂತಹ ಚಾರಣಕ್ಕೆ ಬ್ರೇಕ್ ಹಾಕಲಾಗಿದೆ.

ವಿಪರೀತ ಮಳೆ ಕಾರಣ ಜಲಪಾತ, ನದಿಗಳು ತುಂಬಿ ಹರಿಯುತ್ತಿದ್ದು, ಪಶ್ಚಿಮಘಟ್ಟದ ಪ್ರಮುಖ ಪ್ರದೇಶಗಳ ಮಣ್ಣು ಸಡಿಲಗೊಂಡು ಅಪಾಯ ಮಟ್ಟದಲ್ಲಿದೆ. ಈ ಹಿನ್ನೆಲೆಯಲಿ ಪಶ್ಚಿಮಘಟ್ಟ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಚಾರಣ ನಿಷೇಧಿಸಲಾಗಿದೆ.

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಈಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಬಹುತೇಕ ಗುಡ್ಡ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಂಡಿದೆ. ಜತೆಗೆ ತಪ್ಪಲಿನ ಜಲಪಾತಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಆದರೆ ಅಪಾಯವನ್ನು ಲೆಕ್ಕಿಸದೆ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲಿ ಚಾರಣ, ಜಲಪಾತ ವೀಕ್ಷಣೆ, ನೇತ್ರಾವತಿ ಪೀಕ್ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದರಿಂದ ನಿಯಂತ್ರಣ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಚಾರಣ ಕೈಗೊಳ್ಳುವುದನ್ನು ನಿಷೇಧಿಸಿ ಅರಣ್ಯ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಆದೇಶವನ್ನು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಜಲಪಾತಗಳಿಗೆ ಪ್ರವೇಶ ನಿಷೇಧ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವ ಬಂಡಾಜೆ, ಕಡಮಗುಂಡಿ, ಬೊಳ್ಳೆ, ಎಳನೀರು, ಬಂಗಾರುಪಲ್ಕೆ, ಎರ್ಮಾಯಿ, ಹಾಲಡ್ಕ, ಬಂಡಾಜೆ, ಕಡಮಗುಂಡಿ, ಮಾವಿನಸಸಿ, ಬಡಮಲೆ ಹಬ್ಬಿ, ಹನುಮಗುಂಡಿ ಸೇರಿದಂತೆ ಎಲ್ಲ ಜಲಪಾತಗಳಿಗೆ ಪ್ರವೇಶ ನಿಷೇದಿಸಿದೆ.

ಪ್ರವಾಸಿತಾಣಗಳ ಪ್ರವೇಶ ಇಲ್ಲ

ಪಶ್ಚಿಮಘಟ್ಟದ ಪ್ರಮುಖ ಪೀಕ್ ಪ್ರವಾಸಿ ತಾಣಗಳಾದ ನರಸಿಂಹ ಘಡ, ನೇತ್ರಾವತಿ ಮೂಲ, ಕುದುರೆಮುಖ ಪೀಕ್, ಗಿರಿಮರಿಗುಡ್ಡ, ಸಿರಿಮರಿ ಗುಡ್ಡ, ಕೃಷ್ಣಗಿರಿ, ಸೀತಾಭೂಮಿ, ಗಂಗಡಿಕಲ್ಲು, ಋಶ್ಯ ಶೃಂಗ, ಗಾಳಿಗುಡ್ಡ, ಗುಪ್ಪದ ಗುಡ್ಡ ಸೂಜಿಕಲ್ಲು ಸೇರಿದಂತೆ ಎಲ್ಲ ಪ್ರವಾಸಿ ತಾಣಗಳ ಪ್ರವೇಶವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಕುದುರೆಮುಖ ವನ್ಯಜೀವಿ ವಿಭಾಗ ಆದೇಶಿಸಿದೆ.

ಈ ಬಾರಿಯೂ ಭೂಕುಸಿತ ಸಾಧ್ಯತೆ

ಪುಷ್ಪಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಪಶ್ಚಿಮಘಟ್ಟದ ಪ್ರಮುಖ ಪ್ರದೇಶವಾದ ಸುಳ್ಯ, ಮಡಿಕೇರಿ ಭಾಗದಲ್ಲಿ ಭೂಕಂಪನವಾಗಿರುವುದರಿಂದ ಮಳೆಗೆ ಮಣ್ಣು ಸಡಿಲಗೊಂಡಿದೆ. ಸಡಿಲಗೊಂಡ ಈ ಮಣ್ಣು ಮಳೆ ಬಂದಾಗ ಯಾವ ಹಂತದಲ್ಲಿ ಕುಸಿಯುತ್ತದೆ ಎಂಬುದು ತಿಳಿಯಲು ಸಾಧ್ಯವಿಲ್ಲ. ಕಳೆದ ವರ್ಷ ಸಂಸೆ ಭಾಗದ ಎರ್ಮಾಯಿ ಜಲಪಾತ ಸಮೀಪ ಗುಡ್ಡ ಕುಸಿದು ಚಾರಣಿರೊಬ್ಬರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆಯು ಚಾರಣ ಹಾಗೂ ಜಲಪಾತಗಳಿಗೆ ಪ್ರವೇಶ ನಿಷೇಧಿಸಿರುವುದು ಸ್ವಾಗತಾರ್ಹ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ತಿಳಿಸಿದ್ದಾರೆ.

ವಿಪರೀತ ಮಳೆ ಕಾರಣ ಜಲಪಾತ, ನದಿಗಳು ತುಂಬಿ ಹರಿಯುತ್ತಿದ್ದು ಅಪಾಯ ಮಟ್ಟದಲ್ಲಿರುವುದರಿಂದ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ಬಂಡಾಜೆ, ಕಡಮಗುಂಡಿ, ಬೊಳ್ಳೆ, ಎಳನೀರು, ಬಂಗಾರುಪಲ್ಕೆ ಜಲಪಾತಗಳಿಗೆ ಹಾಗೂ ಜಮಲಾಬಾದ್ ಕೋಟೆ, ನೇತ್ರಾವತಿ ಪೀಕ್ ಪ್ರವಾಸಿತಾಣಗಳ ಪ್ರವೇಶ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವೇಶವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.

ಗಣಪತಿ, ಡಿಎಫ್‌ಒ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net