ವಾಂಡರ್ಸ್‌ ಸ್ಫೋರ್ಟ್ಸ್ ಕ್ಲಬ್‌ನಿಂದ ಚಾರಣ

25adarshkdga1 - Copy
Published on

ಮಡಿಕೇರಿ: ಮಡಿಕೇರಿಯ ವಾಂಡರ್ಸ್‌ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳಿಗೆ ಸೋಮವಾರ ಮಲೆತಿರಿಕೆ ಬೆಟ್ಟಕ್ಕೆ ಚಾರಣ ಹಮ್ಮಿಕೊಳ್ಳಲಾಗಿತ್ತು.


ಮಡಿಕೇರಿಯಿಂದ ಕರಡವರೆಗೆ ಬಸ್ಸಿನಲ್ಲಿ ಸಾಗಿದ ಶಿಬಿರಾರ್ಥಿಗಳು ಕಾಲ್ನಡಿಗೆ ಮೂಲಕ ಮಲೆತಿರಿಕೆ ಬೆಟ್ಟಕ್ಕೆ ಹತ್ತಿದರು. ಸುಮಾರು ೧೨೦ ಮಕ್ಕಳು ಹಾಗೂ ಪಾಲಕರು ಮತ್ತು ತರಬೇತುದಾರರು ಪಾಲ್ಗೊಂಡಿದ್ದರು. ಸುಡುವ ಬಿಸಿಲನ್ನು ಲೆಕ್ಕಿಸದೆ ಮಕ್ಕಳು ಹಾಗೂ ಪಾಲಕರು ಬೆಟ್ಟವನ್ನೇರಿದರು. ಕೆಲವರಿಗೆ ಚಾರಣದ ಅಭ್ಯಾಸವಿಲ್ಲದಿದ್ದರೂ ಸುಧಾರಿಸಿಕೊಂಡು ಎಲ್ಲರ ಜತೆಯಲ್ಲಿ ಹೆಜ್ಜೆ ಹಾಕಿದರು. ಪ್ರಕೃತಿಯ ವಿಹಂಗಮ ನೋಟದ ಸಿರಿಯನ್ನು ಆಸ್ವಾದಿಸಿದರಲ್ಲದೆ, ಪ್ರಕೃತಿಯ ಮಡಿಲಲ್ಲಿ ಸಿಕ್ಕಿದ ಗೊಟ್ಟೆಹಣ್ಣು, ಗುಮ್ಮಟೆ, ಚುಂಡೆ ಹಣ್ಣು, ನುಚ್ಚಟೆ ಹಣ್ಣುಗಳ ಸವಿಯುಂಡು ಸಂಭ್ರಮಿಸಿದರು.


ಬೆಟ್ಟದ ತುತ್ತ ತುದಿಯ ಪ್ರಶಾಂತ ವಾತಾವರಣದಲ್ಲಿ ನೆಲೆನಿಂತಿರುವ ಅಯ್ಯಪ್ಪನ ಸ್ಥಾನದಲ್ಲಿ ಮೌನವಾಗಿ ಕುಳಿತು ಪ್ರಾರ್ಥನೆ ಸಲ್ಲಿಸಿ, ಭಜನೆ ಮಾಡಿದರು. ಆರೋಹಣ ತಂಡದ ನಾಯಕ, ಯೋಗಗುರು ಕೆ.ಕೆ.ಮಹೇಶ್‌ಕುಮಾರ್ ಮತ್ತು ತಂಡದವರು ಮಕ್ಕಳಿಗೆ ಭಜನೆ ಹೇಳಿಕೊಟ್ಟರು. ಮಹಾಮಂಗಳಾರತಿ, ಪಾಯಸ ಪ್ರಸಾದ ಸೇವನೆ ಬಳಿಕ ಬೆಟ್ಟವನ್ನಿಳಿದರು. ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಪತ್ನಿ ರೂಪ ಸತೀಶ್‌ರವರು ಮಕ್ಕಳೊಂದಿಗೆ ಚಾರಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ವಾಂಡರ್ಸ್‌ ಅಧ್ಯಕ್ಷ ಕೋಟೇರ ಮುದ್ದಯ್ಯ, ಸಂಚಾಲಕ ಬಾಬು ಸೊಮಯ್ಯ, ತರಬೆತುದಾರರಾದ ಎಸ್.ಟಿ.ವೆಂಕಟೇಶ್, ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು ಅವರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಚಾರಣದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net