

ಶಿವಮೊಗ್ಗ: ಭಾರತೀಯ ಸನಾತನ ಪರಂಪರೆಯಲ್ಲಿ ವೃಕ್ಷಗಳಿಗೆ ಬಹಳ ಪೂಜ್ಯನೀಯ ಮತ್ತು ಮಹತ್ವದ ಸ್ಥಾನವಿದೆ ಎಂದು ಪರಿಸರವಾದಿ ಡಾ. ಎಲ್.ಕೆ.ಶ್ರೀಪತಿ ಹೇಳಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಪರಿಸರ ದಸರಾ ಅಂಗವಾಗಿ ಒಂದು ಸಾವಿರ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಶ್ವತ್ಥ ಸಸಿ, ಬೇವಿನ ಸಸಿ, ಆಲ, ಹತ್ತು ಹುಣಿಸೆ, ಮೂರು ಬಿಲ್ವ, ನಲ್ಲಿ, ನೇರಿಳೆ, ಐದು ಮಾವಿನ ಗಿಡಗಳನ್ನು ಯಾರು ನೆಡುವರೋ ಅವರಿಗೆ ನರಕ ಪ್ರಾಪ್ತಿಯಿಲ್ಲ. ನರಕ ಎನ್ನುವುದನ್ನು ಇಲ್ಲಿ ಭೂಮಿಯ ಮೇಲೆ ಎಂದು ತಿಳಿದುಕೊಳ್ಳಬೇಕು ಎಂದರು.
ನಮ್ಮ ದೇಶದಲ್ಲಿ ಶೇ.80ರಷ್ಟು ಭಾಗ ಅರಣ್ಯ ಪ್ರದೇಶವಿತ್ತು. ಕೇವಲ ಶೇ.20ರಷ್ಟು ಭಾಗ ಜನವಸತಿ ಇತ್ತು. ಈಗ ಅದು ತಿರುವು ಮುರುವು ಆಗಿದೆ. ಈಗಲಾದರೂ ನಾವು ಎಚ್ಚರಿಕೆ ವಹಿಸಿದ್ದರೆ ಜಾಗತಿಕ ತಾಪಮಾನ ಏರಿಕೆ ತಡೆಯಲು ಸಾಧ್ಯವಿಲ್ಲ. ಕೇವಲ ಗಿಡ ನೆಡುವ ಸಾಂಕೇತಿಕ ಕಾರ್ಯಕ್ರಮ ಇದಾಗಬಾರದು. ನೆಟ್ಟ ಗಿಡವನ್ನು ಕನಿಷ್ಠ ಮೂರು ವರ್ಷ ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಜಿಲ್ಲಾ ಕಾನೂನು ಸೇವಾ ಆಯೋಗದ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿದರು. ಮಹಾನಗರ ಪಾಲಿಕೆ ಪರಿಸರ ದಸರಾ ಸಂಚಾಲಕಿ ತ್ರಿವೇಣಿ, ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ ಬಿ.ಎಂ.ಕುಮಾರಸ್ವಾಮಿ, ಗಿರೀಶ್ ಪಟೇಲ್, ಜಿ.ವಿಜಯಕುಮಾರ್, ಪರಿಸರ ನಾಗರಾಜ್, ಸುರೇಶ್ ಕುಮಾರ್,ನರಸಿಂಹ ಮೂರ್ತಿ, ಅ.ನಾ.ವಿಜೇಂದ್ರ, ಶಿಲ್ಪಾ ಹೆಗಡೆ, ವಾಗೀಶ್ ಮತ್ತಿತರರು ಉಪಸ್ಥಿತರಿದ್ದರು.