ಗಾಳಿ, ಮಳೆಗೆ ಬುಡಮೇಲಾದ ಮರಗಳು

bhr tree
ಬಾಳೆಹೊನ್ನೂರು ಸಮೀಪದ ಗೌರಿಗಂಡಿಯಲ್ಲಿ ಮುಖ್ಯರಸ್ತೆ ಮೇಲೆ ಮರ ಬಿದ್ದಿರುವುದನ್ನು ತೆರವುಗೊಳಿಸುತ್ತಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಮತ್ತೆ ಮಳೆ ಆರ್ಭಟಿಸಿತು. ಭಾರಿ ಗಾಳಿಯಿಂದ ಮರ ಬಿದ್ದು ಕಾರು ಜಖಂಗೊಂಡಿದೆ.

ಭಾನುವಾರ ಬೆಳಗ್ಗೆಯಿಂದ ಮಳೆ ಅಬ್ಬರ ಪುನಃ ಹೆಚ್ಚಾಯಿತು. ಗಂಟೆಗೊಮ್ಮೆ ಧಾರಾಕಾರ ಮಳೆಯಾಯಿಯು. ಪಟ್ಟಣದ ಚಿಕ್ಕಮಗಳೂರು ರಸ್ತೆಯ ಭದ್ರಾ-ದೇವದಾನ ಎಸ್ಟೇಟ್ ಸಮೀಪದ ಮುಖ್ಯರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬೃಹತ್ ಸಿಲ್ವರ್ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದರಿಂದ ಕಾರು ಜಖಂಗೊಂಡಿದೆ. ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಬರುತ್ತಿದ್ದ ಸಂತೋಷ್ ಕಾರು ಚಲಾಯಿಸುತ್ತಿದ್ದರು. ಕಾರಿನ ಬಾನೆಟ್ ಮೇಲೆ ಮರ ಬಿದ್ದಾಗ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾದರು. ಮರ ಮುಖ್ಯರಸ್ತೆಗೆ ಬಿದ್ದ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಸ್ವಲ್ಪ ಅಂತರದಲ್ಲಿಯೇ ಮತ್ತೊಂದು ಕಾಡು ಜಾತಿಯ ಮರವೂ ಬಿದ್ದಿದೆ. ಬಳಿಕ ಸ್ಥಳೀಯ ಎಸ್ಟೇಟ್ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು. ಮರ ಬಿದ್ದ ರಭಸಕ್ಕೆ ನಾಲ್ಕಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿದ್ದು, ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಣಸುಕೊಡಿಗೆ ಇಸ್ಮಾಯಿಲ್ ಎಂಬುವರ ಮನೆಯ ಶೆಡ್ ಮೇಲೆ ಮರ ಬಿದ್ದು ಹಾನಿಯಾಗಿದೆ.ಖಾಂಡ್ಯ ಹೋಬಳಿ ಗೌರಿಗಂಡಿ ಸಮೀಪ ಶನಿವಾರ ಸಂಜೆ ಬೃಹತ್ ಮರ ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಗೆ ಬಿದ್ದಿದ್ದು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಸ್ಥಳೀಯರು ಮರ ತೆರವುಗೊಳಿಸಿದರು. ಇಲ್ಲಿ ಎರಡು ವಿದ್ಯುತ್ ಕಂಬಗಳು ತುಂಡಾಗಿವೆ. ಸಾರಗೋಡು ಸಮೀಪದಲ್ಲಿಯೂ ವಿದ್ಯುತ್ ಕಂಬ ಹಾಗೂ ರಸ್ತೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಮೆಸ್ಕಾಂ ಅಧಿಕಾರಿಗಳೊಂದಿಗೆ ವಿಪತ್ತು ಘಟಕದ ಸೇವಕರು ಸೇರ್ಪಡೆಗೊಂಡು ಮರ ತೆರವುಗೊಳಿಸಿದರು.ಖಾಂಡ್ಯ ಹೋಬಳಿ ಬಿದರೆ ಗ್ರಾಮದ ಲೋಕಪ್ಪಗೌಡ ಎಂಬುವರ ಮನೆ ಸಂಪೂರ್ಣ ಕುಸಿದಿದೆ. ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಪಂ ಸದಸ್ಯ ಸುರೇಶ್, ಗ್ರಾಮ ಲೆಕ್ಕಿಗ ಶಿವಕುಮಾರ್, ಗ್ರಾಪಂ ಕಾರ್ಯದರ್ಶಿ ಗೋಪಾಲ್ ಶೆಟ್ಟಿ, ವಿಪತ್ತು ಘಟಕದ ಸ್ವಯಂ ಸೇವಕ ವಿ.ಸಿ.ರಘುಪತಿ ಭೇಟಿ ನೀಡಿದ್ದರು. ಬಾಳೆಹೊನ್ನೂರು, ಖಾಂಡ್ಯ, ಸಂಗಮೇಶ್ವರಪೇಟೆ, ಹಿರೇಗದ್ದೆ, ಅರಳೀಕೊಪ್ಪ, ಹೇರೂರು, ಸೀಗೋಡು, ಮಾಗುಂಡಿ, ಬನ್ನೂರು, ಗಡಿಗೇಶ್ವರ ಮುಂತಾದ ಕಡೆಗಳಲ್ಲಿ ಮಳೆಯೊಂದಿಗೆ ಭಾರಿ ಗಾಳಿ ಬೀಸುತ್ತಿದ್ದು, ಹಲವೆಡೆ ಮರಗಳು ಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net