

ಮಡಿಕೇರಿ:
ಬುಧವಾರ ನಡೆದ ಚುನಾವಣೆ ಹಲವು ವಿಶೇಷಗಳಿಗೆ ಸಾಕ್ಷಿ ಆಯಿತು. ಕುಶಾಲನಗರದಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಚೈತನ್ಯಾ ಚಂದ್ರಮೋಹನ್ ತಮ್ಮ ಮನೆ ಬಳಿ ತಾಯಿ ಜತೆಗೂಡಿ ಗಿಡವೊಂದನ್ನು ನೆಟ್ಟು ಸಂಭ್ರಮಿಸಿದರು. ಮೊದಲ ಮತದಾನದ ನೆನಪು ಗಿಡದ ರೂಪದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ಅವರು ಹೇಳಿದರು. ಸುಂಟಿಕೊಪ್ಪದಲ್ಲಿ ಅವಳಿ ಸಹೋದರಿಯರಾದ ಪ್ರಜ್ಞಾ ಮತ್ತು ಪೂಜಾ ಒಟ್ಟಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಇಬ್ಬರಿಗೂ ಇದು ಮೊದಲ ಮತದಾನವಾಗಿದ್ದು, ಒಟ್ಟಿಗೆ ಆಗಮಿಸಿ ಮತ ಹಾಕಿದ್ದು ಖುಷಿ ನೀಡಿದೆ ಎಂದರು.
ಸುಂಟಿಕೊಪ್ಪದಲ್ಲಿ ೮೦ರ ಹರೆಯದ ಎಂ. ಕುಂಜಿರ ಎಂಬವರು ಮಗನ ಜತೆ ಮತಗಟ್ಟೆಗೆ ಆಗಮಿಸಿ, ಚುನಾವಣಾ ಆಯೋಗದ ಸಹಾಯಕರ ನೆರವಿನಿಂದ ಗಾಲಿ ಕುರ್ಚಿಯಲ್ಲಿ ತೆರಳಿ ಮತ ನೀಡಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾಪೋಕ್ಲು ಸಮೀಪದ ಬೇತು ಸ.ಹಿ.ಪ್ರಾ.ಶಾಲೆಯ ಮತಗಟ್ಟೆಗೆ ಹಿರಿಯ ವಿಕಲಚೇತನರೊಬ್ಬರು ಗಾಲಿ ಕುರ್ಚಿಯಲ್ಲಿ ಆಗಮಿಸಿ ಮತದಾನ ಮಾಡಿ ತೆರಳಿದರು.
ಮಡಿಕೇರಿ ಎವಿ ಶಾಲೆ ಮತಗಟ್ಟೆಯಲ್ಲಿ ಸಮಯ್‌ತಾಜ್ ಎಂಬವರು ತಮ್ಮ ೧೨ ದಿನಗಳ ಕಂದಮ್ಮನೊಂದಿಗೆ ಆಗಮಿಸಿ ಮತದಾನ ಮಾಡಿದರು. ಮಹತ್ವದ ಮತದಾನ ತಪ್ಪಿಸಲು ಇಚ್ಛಿಸುವುದಿಲ್ಲ ಎಂದು ಇದೇ ವೇಳೆ ಹೇಳಿದರು.