ರೈಲ್ವೆ ಹಳಿ ದ್ವಿಗುಣಕ್ಕೆ ಮರಗಳ ಬಲಿ

tree
Published on

ಮಂಗಳೂರು: ಮಾರ್ಗನ್ಸ್‌ಗೇಟ್ ಬಳಿ ಕಳೆದ ಕೆಲತಿಂಗಳಿಂದ ಹಳಿ ದ್ವಿಗುಣ ಕಾಮಗಾರಿ ನಡೆಯುತ್ತಿದ್ದು, ನಗರ ಹಸಿರೀಕರಣಕ್ಕೆಂದು ನೆಟ್ಟಿರುವ ಮರಗಳು ಬಲಿಯಾಗಿವೆ. ಅಗೆದ ಭಾರಿ ಪ್ರಮಾಣದ ಮಣ್ಣನ್ನು ಬುಲ್ಡೋಜರ್ ಬಳಸಿ ರೈಲು ಹಳಿಯ ಇಕ್ಕೆಲದಲ್ಲೂ ಪೇರಿಸಲಾಗುತ್ತಿದ್ದು, ಮರಗಳನ್ನು ಅದರಡಿಗೆ ಹಾಕಿ ನಾಶಪಡಿಸಲಾಗುತ್ತಿದೆ.

ಇದರಿಂದ ಒಂದೆಡೆ ನಗರದ ಹಸಿರು ವಲಯ ಗಣನೀಯವಾಗಿ ಕಡಿಮೆಯಾಗುವುದರೊಂದಿಗೆ ಈ ಪರಿಸರದಲ್ಲಿ ಮುಂದಿನ ಮಳೆಗಾಲ ಕೃತಕ ನೆರೆ ಉಂಟಾಗಿ ಮನೆಗಳಿಗೆ ನೀರುನುಗ್ಗುವ ಭೀತಿ ಎದುರಾಗಿದೆ.

ಆಗುತ್ತಿರುವುದೇನು?: ಮಂಗಳೂರು ಸೆಂಟ್ರಲ್ ಸ್ಟೇಷನ್‌ನಿಂದ ನೇತ್ರಾವತಿ ಮಧ್ಯೆ ಹಳಿ ದ್ವಿಗುಣಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅದಕ್ಕಾಗಿ ಈಗಿರುವ ಹಳಿಯ ದಕ್ಷಿಣ ಭಾಗದಲ್ಲಿ ಅಗಲಗೊಳಿಸಲಾಗುತ್ತಿದೆ. ಇದಕ್ಕಾಗಿ ಆ ಭಾಗದಲ್ಲಿ ನಗರ ಹಸಿರೀಕರಣದ ಅಂಗವಾಗಿ ನೆಡಲಾಗಿದ್ದ ಹಲವು ಗಿಡಗಳನ್ನು ಕಿತ್ತು ಹಾಕಲಾಗಿದೆ.

ಅಭಿವೃದ್ಧಿ ಕಾಮಗಾರಿಗಾಗಿ ಗಿಡವನ್ನು ಒಂದೆಡೆ ತೆರವುಗೊಳಿಸಲಾಗಿದೆ, ಅಷ್ಟಕ್ಕೆ ಇದು ಸೀಮಿತವಾಗಿಲ್ಲ. ಅಗಲಗೊಳಿಸುವಾಗ ಭಾರಿ ಪ್ರಮಾಣದ ಮಣ್ಣು ಸಿಗುವುದನ್ನು ಟಿಪ್ಪರ್‌ಗಳಲ್ಲಿ ತಂದು ರೈಲ್ವೆ ಲೈನ್‌ನ ಉತ್ತರ ಭಾಗದಲ್ಲಿ ಪೇರಿಸಲಾಗುತ್ತಿದೆ. ಅಲ್ಲಿದ್ದ ಹಲವಾರು ಸಾಧಾರಣ ಗಾತ್ರದ ಗಿಡ ಮರಗಳನ್ನು ಈ ಮಣ್ಣಿನಡಿಯೇ ಹುಗಿಯಲಾಗಿದೆ. ಎತ್ತರವಾದ ಮರಗಳನ್ನು ಬುಲ್ಡೋಜರ್ ಬಳಸಿ ಮುರಿಯಲಾಗುತ್ತಿದೆ. ಸಾಗುವಾನಿಯಂತಹ ಮರಗಳನ್ನು ಎರಡು-ಮೂರು ತಿಂಗಳ ಹಿಂದೆಯೇ ಕಡಿದು ಸಾಗಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಈಗ ಮಣ್ಣು ಸುರಿಯಲಾಗುತ್ತಿರುವ ಜಾಗ ರೈಲ್ವೆ ಇಲಾಖೆಗೆ ಸೇರಿದ್ದೇ ಆಗಿದೆ. ಆದರೆ ಅದರಲ್ಲಿ ಸಾಕಷ್ಟು ಮರಗಳಿದ್ದವು. ಅಲ್ಲದೆ ಮಾರ್ಚ್‌ವರೆಗೂ ಶುದ್ಧ ನೀರು ಹರಿಯುವ ತೋಡುಗಳಿದ್ದವು. ಈಗ ಅದೆಲ್ಲದರ ಮೇಲೆ 10-15 ಮೀಟರ್ ಎತ್ತರಕ್ಕೆ ಮಣ್ಣು ಸುರಿಯಲಾಗಿದೆ.

ನಮ್ಮ ಕಾಂಪೌಂಡ್ ಭಾಗದಲ್ಲೂ ಮಣ್ಣು ಹಾಕಲು ಬಂದಿದ್ದರು, ಆದರೆ ತೋಡು ಬ್ಲಾಕ್ ಆಗುತ್ತದೆ ಎಂದು ನಾವು ಪ್ರತಿಭಟಿಸಿದೆವು. ಹಾಗಾಗಿ ಸದ್ಯ ಹಾಕಿಲ್ಲ ಎಂದು ಸ್ಥಳೀಯರೊಬ್ಬರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು. ಆ ಭಾಗವನ್ನು ಹಾಗೆಯೇ ಬಿಟ್ಟು ಅಲ್ಲಿಂದ ಮುಂದೆ ಮಣ್ಣು ಸುರಿಯುತ್ತಾ ಹೋಗಿದ್ದಾರೆ. ಒಂದು ಕಡೆಯಂತೂ 15 ಮೀಟರ್‌ಗೂ ಹೆಚ್ಚು ಎತ್ತರದಲ್ಲಿ ಮಣ್ಣು ಹಾಕಲಾಗಿದೆ.

ತೋಡಿನ ನೀರು ಬ್ಲಾಕ್ ಆಗುವ ಅಪಾಯ: ಒಟ್ಟಾರೆ ಮಣ್ಣು ತುಂಬಿರುವುದರಿಂದ ಮಳೆಗಾಲದಲ್ಲಿ ತೋಡಿನ ನೀರು ಹರಿಯುವುದಕ್ಕೆ ಜಾಗವಿಲ್ಲದೆ ನೀರು ಬ್ಲಾಕ್ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಮೇಲ್ಭಾಗದಲ್ಲಿ ಅವೈಜ್ಞಾನಿಕವಾಗಿ ಮಣ್ಣು ಸುರಿದಿರುವ ಕಾರಣ ನೀರು ಅದನ್ನು ಕೊಚ್ಚಿಕೊಂಡು ಹೋಗುವ ಅಪಾಯವೂ ಇದೆ.

ನಗರದಲ್ಲಿ ಇರುವುದೇ ಕೆಲವು ಹಸಿರು ಭಾಗಗಳು. ಇಲ್ಲಿದ್ದ ಮರಗಳನ್ನು ಉಳಿಸಿಕೊಳ್ಳಬಹುದಿತ್ತು. ರೈಲ್ವೆ ಇಲಾಖೆಯವರು ಮನಸು ಮಾಡಿದರೆ ಹಸಿರು ಬೆಳೆಸಿ ಉಳಿಸಬಹುದು. ಆದರೆ ಅವರು ಗಿಡಗಳನ್ನು ನಾಶ ಮಾಡಿದ್ದಾರೆ. ಜೀತ್ ಮಿಲನ್ ರೋಶ್ ಆ ಭಾಗದಲ್ಲಿ ಅನುಮತಿ ಇಲ್ಲದೆ ರೈನ್ ಟ್ರೀ ಕಡಿಯುವುದಕ್ಕೆ ಮುಂದಾಗಿದ್ದರು. ಅದನ್ನು ನಿಲ್ಲಿಸಿದ್ದೇವೆ. ಆ ಬಳಿಕ ಕೆಲವು ಮರ ಕಡಿಯಲು ರೈಲ್ವೆಯವರು ಅನುಮತಿ ಕೇಳಿದ್ದಾರೆ. ಕೇಂದ್ರ ಸರ್ಕಾರದ ಜಾಗವಾಗಿರುವುದರಿಂದ ಅಲ್ಲಿ ಯೋಜನೆಗಾಗಿ ನಾವು ಅನುಮತಿ ನಿರಾಕರಿಸುವುದು ಕಷ್ಟ. ಶ್ರೀಧರ್, ಆರ್‌ಎಫ್‌ಒ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net