

ಆರ್.ತುಳಸಿಕುಮಾರ್
ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಪ್ರತಿಯಾಗಿ ಆಮ್ಲಜನಕ ಉತ್ಪತ್ತಿ ಮಾಡುವ ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸಬೇಕೆಂಬ ಕೂಗು ಎದ್ದಿದೆ. ಇದಕ್ಕೆ ಪೂರಕವಾಗಿ ಬಿಬಿಎಂಪಿ ಅಭಿವೃದ್ಧಿಪಡಿಸುವ ಉದ್ಯಾನಗಳನ್ನು ‘ಟ್ರೀ ಪಾರ್ಕ್’ ಮಾದರಿಗೆ ಪ್ರಥಮ ಆದ್ಯತೆ ನೀಡಬೇಕಾದ ಅಗತ್ಯ ಇದೆ ಎಂಬುದಾಗಿ ಪರಿಸರ ತಜ್ಞರು ವಾದ ಮುಂದಿಟ್ಟಿದ್ದಾರೆ.
ಬೆಂಗಳೂರು ‘ಉದ್ಯಾನಗಳ ನಗರ’ ಎಂಬ ಹೆಗ್ಗಳಿಕೆ ಪಡೆದಿದೆ. ದಶಕಗಳ ಹಿಂದಿನಿಂದಲೂ ಇರುವ ಈ ಗೌರವಕ್ಕೆ ಕ್ರಮೇಣ ಚ್ಯುತಿ ಬರುತ್ತಿದೆ. ಆದರೂ, ಇಡೀ ದೇಶದಲ್ಲಿ ಅತಿ ಹೆಚ್ಚು (1,284) ಪಾರ್ಕ್‌ಗಳನ್ನು ಹೊಂದುವಲ್ಲಿ ಬಿಬಿಎಂಪಿ ದಾಖಲೆ ಸೃಷ್ಟಿಸಿದೆ. ಸಂಖ್ಯೆ ದೃಷ್ಟಿಯಲ್ಲಿ ‘ಸಾವಿರ ಉದ್ಯಾನಗಳ ನಗರ’ ಎಂದು ಹೇಳುತ್ತಿದ್ದರೂ, ಈ ಪಾರ್ಕ್‌ಗಳಿಂದ ಮಾಲಿನ್ಯ ಪ್ರಮಾಣ ತಗ್ಗಿಸಲು ಸಾಧ್ಯವಾಗಿಲ್ಲ. ಅಲಂಕಾರಿಕ ಸಸ್ಯಗಳು ಹಾಗೂ ಕುಬ್ಜ ಗಿಡಗಳನ್ನು ಬೆಳೆಸಲು ನೀಡಿರುವ ಆದ್ಯತೆಯನ್ನು ಸ್ಥಳೀಯ ಮರಗಳು ಹಾಗೂ ಅಧಿಕ ಆಮ್ಲಜನಕ ಉತ್ಪಾದಿಸುವ ಪ್ರಭೇದಗಳಾದ ಅರಳಿ, ಆಲ, ಬೇವು, ಹೊಂಗೆ, ಅರ್ಜುನ, ಶ್ರೀಗಂಧ, ತೇಗ, ಬಿದಿರು ತಾಳೆಮರಗಳಿಗೆ ಅಷ್ಟಾಗಿ ಮಣೆ ಹಾಕಿಲ್ಲ.
ಟ್ರೀ ಪಾರ್ಕ್‌ಗೆ ಬೇಕಿದೆ ವಿಶೇಷ ಒತ್ತು:
ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಇಂತಿಷ್ಟು ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳ ನಿರ್ವಹಣೆಗೆಂದೇ ವಾರ್ಷಿಕ 100 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಜಾಗದ ಕೊರತೆಯಿಂದ ಹೊಸ ಉದ್ಯಾನಗಳ ವಿಸ್ತೀರ್ಣ ಕಡಿಮೆಯಾಗುತ್ತಿದ್ದು, ಒಂದು ಪಾರ್ಕ್ ಅಭಿವೃದ್ಧಿಪಡಿಸಲು 3-4 ಕೋಟಿ ರೂ. ವ್ಯಯಿಸಲಾಗುತ್ತಿದೆ. ಕೆಲವು ಪಾರ್ಕ್‌ಗೆ 5 ಕೋಟಿ ರೂ. ಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ. ಇಲ್ಲೆಲ್ಲ ಸೌಂದರ್ಯಿಕರಣದ ಹೆಸರಿನಲ್ಲಿ ಲಾನ್, ಅಲಂಕಾರಿಕ ಸಸಿಗಳು, ಗ್ರಾನೈಟ್ ಕಲ್ಲುಗಳ ಬೆಂಚ್, ನಡಿಗೆ ಪಥಕ್ಕೆಹಣ ಸುರಿಯಲಾಗಿದೆ. ಇದರ ಬದಲು ದೊಡ್ಡ ಮರಗಳನ್ನು ಬೆಳೆಸಲು ಆದ್ಯತೆ ನೀಡಿಲ್ಲ. ಉದ್ಯಾನ ಅಭಿವೃದ್ಧಿ ಹೆಸರಿನಲ್ಲಿ ದುಬಾರಿ ಬಿಲ್‌ಅನ್ನು ಗುತ್ತಿಗೆದಾರರಿಗೆ ಪಾವತಿಸಿ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ದಶಕದ ಹಿಂದೆಯೇ ಟ್ರೀ ಪಾರ್ಕ್ ಮಾದರಿಯನ್ನು ಪಾಲಿಕೆ ಅಳವಡಿಸಿಕೊಂಡಿದ್ದರೂ, ಅದನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲ ಸಫಲತೆ ಕಂಡಿಲ್ಲ.
ವಲಯವಾರು ಪಾರ್ಕ್‌ಗಳ ವಿವರ:
ವಲಯ ಪಾರ್ಕ್ ಸಂಖ್ಯೆ
ಪೂರ್ವ 290
ಪಶ್ಚಿಮ 230
ದಕ್ಷಿಣ 280
ಬೊಮ್ಮನಹಳ್ಳಿ 138
ಆರ್‌ಆರ್‌ನಗರ 130
ಯಲಹಂಕ 122
ದಾಸರಹಳ್ಳಿ 47
ಮಹದೇವಪುರ 38
ಹಿಂದೆಲ್ಲ ನಾವು ಬೆಂಗಳೂರಿಗೆ ಬಂದಿಳಿದಾಗ ಸಾಲು ಮರಗಳು, ಜಂಕ್ಷನ್‌ಗಳಲ್ಲಿ ನೀರಿನ ಕಾರಂಜಿ ಕಾಣುತ್ತಿತ್ತು. ಆದರೆ ನಗರ ಬೆಳೆದಂತೆಲ್ಲ ಮಾಲಿನ್ಯ ಹೆಚ್ಚಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ನಗರದೆಲ್ಲೆಡೆ ಹಸಿರು ಹೆಚ್ಚಿಸುವ ಜತೆಗೆ ಆಮ್ಲಜನಕ ಸಿಗುವ ಮರಗಳನ್ನೇ ನೆಟ್ಟು ಪೋಷಿಸುವ ಅಗತ್ಯ ಇದೆ.
- ಪಿ.ಎಂ.ನರೇಂದ್ರಸ್ವಾಮಿ, ಕೆಎಸ್‌ಪಿಸಿಬಿ ಅಧ್ಯಕ್ಷ
ಪಾಲಿಕೆಯು ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಗಮನ ನೀಡಿದೆ. ಈಗಾಗಲೇ ಅಭಿವೃದ್ಧಿಯಾಗಿರುವ ಉದ್ಯಾನಗಳಲ್ಲಿ ಬೃಹತ್ ಮರಗಳಾಗುವ ಪ್ರಭೇದ ಸಸಿಗಳನ್ನು ನೆಡಲಾಗಿದೆ. ಹೊಸ ಪಾರ್ಕ್‌ಗಳಲ್ಲಿ ಇದೇ ಮಾದರಿಯನ್ನು ಅನುಸರಿಸುತ್ತಿದ್ದೇವೆ. ದೇಶಿ ತಳಿಗಳಿಗೆ ಒತ್ತು ನೀಡಲು ಈ ವರ್ಷ 50 ಪಾರ್ಕ್‌ಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
- ಎಂ.ಆರ್.ಚಂದ್ರಶೇಖರ್, ಬಿಬಿಎಂಪಿ, ಉಪ ನಿರ್ದೇಶಕ (ತೊಟಗಾರಿಕೆ ವಿಭಾಗ)