ಜಿಗಳೂರು ಬಳಿ ತಲೆಎತ್ತಲಿದೆ ಟ್ರೀ-ಪಾರ್ಕ್

19 RON 1
Published on

ಬಸವರಾಜ ಪಟ್ಟಣಶೆಟ್ಟಿ ರೋಣ

ತಾಲೂಕಿನ ಜಿಗಳೂರು ಕೆರೆ 300 ಎಕರೆ ವಿಸ್ತಾರವಾಗಿದ್ದು ರೋಣ, ನರೇಗಲ್ಲ ಮತ್ತು ಗಜೇಂದ್ರಗಡ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗೆ ಆಸರೆಯಾಗಿದೆ. ಕೆರೆಯ ಪ್ರದೇಶವನ್ನು ಮತ್ತಷ್ಟು ಸುಂದರಗೊಳಿಸಲು ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಜಿಗಳೂರು ಕೆರೆಯ ಸುತ್ತಲೂ ಜಾಲಿಕಂಟಿ ಬೆಳೆದು ಕೆರೆಯ ಅಂಗಳ ನೋಡುವ ಸ್ಥಿತಿಯಲ್ಲಿ ಇರಲಿಲ್ಲ. ಅದನ್ನೆಲ್ಲ ತೆರವುಗೊಳಿಸಿ ಜೂನ್ ತಿಂಗಳಿನಿಂದ ಸಾವಿರಾರು ಗಿಡಗಳನ್ನು ನಡೆಲು ನಿರ್ಧರಿಸಲಾಗಿದೆ. ವೀಕ್ಷಣಾ ಗೋಪುರ, ಪಕ್ಷಿಧಾಮ ಹಾಗೂ ಮಹಾದ್ವಾರ ನಿರ್ಮಿಸಿ ಆಕರ್ಷಕ ಪರಿಸರ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಸಸ್ಯೋದ್ಯಾನ ನಿರ್ಮಾಣ ಭರದಿಂದ ಸಾಗಿದೆ. ನಾನಾ ಜಾತಿಯ ಒಟ್ಟು 2000 ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಮಕ್ಕಳಿಗೆ ಆಟವಾಡಲು ಪರಿಕರ ಅಳವಳಡಿಕೆ, ಸ್ಥಳೀಯ ಮತ್ತು ವಲಸೆ ಪಕ್ಷಿಗಳ ಸಂಪತ್ತನ್ನು ಪರಿಚಯಸಿ, ಅವುಗಳ ಕುರಿತು ಫೋಟೊ ಸಮೇತ ಮಾಹಿತಿ ಒಳಗೊಂಡ ಫಲಕಗಳ ಹಾಕಲು ಟ್ರೀ-ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ.

ಸಾರ್ವಜನಿಕರಿಗೆ ವಾಯುವಿಹಾರ ಸ್ಥಳವಾಗಿಸಲು ಕೃತಕ ಅರಣ್ಯ ತಲೆಎತ್ತಲಿದೆ. ಬೊಟಿಂಗ್ ವ್ಯವಸ್ಥೆಗೂ ಯೋಜನೆ ಹಾಕಿಕೊಳ್ಳಲಾಗಿದೆ. ಕೆರೆ ಸುತ್ತಲಿನ ಪ್ರದೇಶ ಹಲವಾರು ಪಕ್ಷಿ, ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು ಪಾರ್ಕ್ ನಿರ್ಮಾಣದಿಂದ ಅವುಗಳ ಸಂತತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

ಶಾಸಕ ಜಿಎಸ್ಪಿ ಪ್ರಯತ್ನ: ಜಿಗಳೂರು ಕೆರೆ ಕೇವಲ ನೀರು ಪೂರೈಕೆಗೆ ಮಾತ್ರ ಸೀಮಿತವಾಗಬಾರದು, ಕೆರೆ ಪಕ್ಕದಲ್ಲಿ ಟ್ರೀ ಪಾರ್ಕ್ ನಿರ್ಮಿಸಬೇಕು ಎಂಬ ಮಹದಾಸೆ ಶಾಸಕ ಜಿ.ಎಸ್. ಪಾಟೀಲರದು. ಇದಕ್ಕಾಗಿ 5 ಕೋಟಿ ರೂ.ಅನುದಾನ ತಂದಿದ್ದು 9 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಿಸಿ ಕೆರೆಯ ಅಂದ ಹೆಚ್ಚಿಸುವುದರ ಜತೆ ಪ್ರವಾಸಿ ತಾಣವನ್ನಾಗಿ ಮಾಡುವ ಚಿಂತನೆ ಅವರದು. ಟ್ರೀ- ಪಾರ್ಕ್‌ನ ನಿರ್ಮಾಣವಾದರೆ ಸುತ್ತಲಿನ ಜಮೀನುಗಳ ಮಣ್ಣಿನ ಫಲವತ್ತತೆ ಹೆಚ್ಚಲಿದೆ, ಅಂತರ್ಜಲಮಟ್ಟ ವೃದ್ಧಿ, ಹಲವಾರು ಪಕ್ಷಿ, ವನ್ಯಜೀವಿಗಳಿಗೆ ಆವಾಸ್ಥಾನ ಒದಗಿಸುವಲ್ಲಿ ಇದು ಸಹಕಾರಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net