ಮೈಸೂರಿನಲ್ಲಿ ಮರ ಕಡಿತ : ಲೋಕಾಯುಕ್ತಗೆ ದೂರು

mysore
Published on

ಮೈಸೂರು: ನಗರದ ಎಸ್‌ಪಿ ಕಚೇರಿ ಬಳಿಯ ಹೈದರಾಲಿ ರಸ್ತೆಯ 40 ಮರಗಳನ್ನು ಕಡಿದಿರುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ಕ್ರಮಕ್ಕೆ ಕೋರಿ ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲಾಗಿದೆ ಎಂದು ಪರಿಸರವಾದಿ ಭಾನು ಮೋಹನ್ ತಿಳಿಸಿದರು.

ಮೈಸೂರು ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಎನ್. ಬಸವರಾಜು, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಜರ್‌ಬಾದ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದೇನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾರ್ಚ್ 20 ರಂದು ಪಾಲಿಕೆಯು ರಸ್ತೆಯನ್ನು 30 ಮೀಟರ್ ಅಗಲೀಕರಿಸಬೇಕೆಂದು ಸಲ್ಲಿಸಿದ ಮನವಿ ಆಧಾರದ ಮೇಲೆ ಮಾ. 25 ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ 40 ಮರಗಳ ಕಟಾವಿಗೆ ಆದೇಶ ಮಾಡಿದ್ದಾರೆ. ಈ ಕುರಿತು ನಾವು ಏ.11 ರಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದೆವು. ಆದರೆ, ಮರ ಕಡಿಯಲೇ ಬೇಕು ಎಂಬ ಉದ್ದೇಶದಿಂದ ನಮ್ಮ ಮನವಿಗೆ ಸ್ಪಂದಿಸದೆ ಏ.13 ರಂದು ಭಾನುವಾರ ರಜಾ ದಿನ ಮರವನ್ನು ರಾತ್ರೋರಾತ್ರಿ ಕಡಿಯಲಾಗಿದೆ. ಯಾವುದೇ ಕಾರ್ಯಾದೇಶ ಇಲ್ಲದೇ ರಾತ್ರೋ ರಾತ್ರಿ ಕಳ್ಳರಂತೆ ಆರೋಗ್ಯಕರವಾಗಿದ್ದ 40 ಮರಗಳನ್ನು 2 ಜೆಸಿಬಿ, 2 ಲಾರಿ, 1 ಗೂಡ್ಸ್ ಆಟೋ, 2 ಪೆಟ್ರೋಲ್ ಗರಗಸ ಬಳಸಿಕೊಂಡು ಕಟಾವು ಮಾಡಿ ಕಳ್ಳ ಸಾಗಣೆ ಮಾಡುತ್ತಿದ್ದರು. ಇವರನ್ನು ನಾವು ಮಾಲು ಸಮೇತ ಹಿಡಿದುಕೊಟ್ಟಾಗ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ ಕ್ರಮ ಕೈಗೊಳ್ಳುವ ಬದಲು ರಕ್ಷಣೆ ನೀಡಿ ಮಾಲು ಸಾಗಿಸಲು ನೆರವಾಗಿದ್ದಾರೆ. ಹೀಗಾಗಿ ಇವರೆಲ್ಲರ ವಿರುದ್ಧ ಕ್ರಮಕ್ಕಾಗಿ ಲೋಕಾಯುಕ್ತಗೆ ದೂರು ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕೀಲ ವಿ. ರವಿಕುಮಾರ್, ಪರಿಸರವಾದಿ ಆದರ್ಶ್ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net