ಚಲಿಸುತ್ತಿದ್ದ ಬೈಕ್ ಮೇಲೇ ಬಿದ್ದ ಮರ!; ನಡೆದುಕೊಂಡು ಹೋಗುತ್ತಿದ್ದವರೂ ಮರದಡಿಗೆ ಸಿಲುಕಿದರು..

Untitled-2
Published on

ಶಿವಮೊಗ್ಗ: ರಾಜ್ಯದ ಹಲವೆಡೆ ಭಾರಿ ಗಾಳಿ ಮಳೆ ಬೀಸುತ್ತಿದ್ದು, ಮಳೆ ಸಂಬಂಧಿತ ಅವಾಂತರಗಳು ಕೇಳಿಬರುತ್ತಿವೆ. ಈ ನಡುವೆ ಚಲಿಸುತ್ತಿದ್ದ ಬೈಕ್ ಮೇಲೆಯೇ ಮರವೊಂದು ಬಿದ್ದಿದ್ದಲ್ಲದೆ, ನಡೆದುಕೊಂಡು ಹೋಗುತ್ತಿದ್ದವರೂ ಆ ಮರದಡಿಗೆ ಸಿಲುಕಿದ ಪ್ರಕರಣವೂ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರದ ಕೊಡಚಾದ್ರಿ ಕಾಲೇಜು ಎದುರು ಇಂದು ಈ ಅವಘಡ ಸಂಭವಿಸಿದೆ. ಬೈಕ್​ವೊಂದು ಸಾಗುತ್ತಿದ್ದಾಗ ಬೀಸುತ್ತಿದ್ದ ಭಾರಿ ಗಾಳಿ ಮಳೆಗೆ ಉರುಳಿದ ಮರ ಅಪಘಾತಕ್ಕೆ ಕಾರಣವಾಗಿದೆ. ಬೈಕ್ ಸವಾರ, ಮಾವಿನಕೊಪ್ಪ ಬಡಾವಣೆಯ ಸಾದಿಕ್​ ಎಂಬವರು ಬೈಕ್ ಸಮೇತ ಮರದಡಿಗೆ ಸಿಲುಕಿ ಗಂಭೀರ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಸಾದಿಕ್​ ಮಾತ್ರವಲ್ಲದೆ ಮತ್ತೊಬ್ಬ ಬೈಕ್ ಸವಾರ ಪ್ರತೀಕ್​ ಹಾಗೂ ನಡೆದುಕೊಂಡು ಹೋಗುತ್ತಿದ್ದ ಋತ್ವಿಕ್ ಎಂಬವರೂ ಮರದಡಿಗೆ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಹೊಸನಗರ ಹಾಗೂ ಶಿವಮೊಗ್ಗ ನಡುವಿನ ರಸ್ತೆ ಸಂಪರ್ಕ ಕೆಲಕಾಲ ಸ್ಥಗಿತಗೊಂಡಿತ್ತು. ಬಳಿಕ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net