ಮರ ಬಿದ್ದು ಪೌರಕಾರ್ಮಿಕ ಸಾವು: ಮಗನ ಜನ್ಮದಿನ ಆಚರಿಸಲು ಕೇಕ್ ತರಲು ಹೋದಾಗ ದುರಂತ

10_02_Mdy_02(Protest)
Published on

ಮಂಡ್ಯ: ನಗರದ ತಾವರೆಗೆರೆ ಉದ್ಯಾನದ ಬಳಿ ಗುರುವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮರ ಬಿದ್ದು ನಗರಸಭೆಯ ಗುತ್ತಿಗೆ ಪೌರಕಾರ್ಮಿಕ ಮೃತಪಟ್ಟಿದ್ದಾರೆ.

ನೆಹರುನಗರದ ಪೌರಕಾರ್ಮಿಕ ಕಾಲನಿಯ ನಿವಾಸಿ ಉದಯ್‌ಕುಮಾರ್(24) ಮೃತಪಟ್ಟವರು. ತನ್ನ ಮಗನ ಜನ್ಮದಿನ ಆಚರಣೆಗೆ ಕೇಕ ತರಲು ಗುತ್ತಲು ಬಡಾವಣೆ ಕಡೆ ಹೋಗುತ್ತಿದ್ದಾಗ ಒಣಗಿದ ಮರ ಬಿದ್ದು ದುರಂತ ಸಂಭವಿಸಿದೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಪ್ರತಿಭಟನೆ: ಉದಯ್ ಸಾವಿನ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಆಗ್ರಹಿಸಿ ಶುಕ್ರವಾರ ಮಿಮ್ಸ್ ಆವರಣದಲ್ಲಿ ರಾಜ್ಯ ಪೌರ ಕಾರ್ಮಿಕರ ಸಂಘ, ಜಿಲ್ಲಾ ಪೌರಕಾರ್ಮಿಕರ ಸಂಘ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಉದಯ್‌ಕುಮಾರ್ ಸಾವಿಗೆ ನಗರಸಭೆ ಹಾಗೂ ಅರಣ್ಯ ಇಲಾಖೆ ನೇರ ಹೊಣೆಯಾಗಿದೆ. ಅಧಿಕಾರಿಗಳ ನಿರ್ಲಕ್ಷೃದಿಂದ ಕುಟುಂಬ ಬೀದಿಪಾಲಾಗಿದೆ. ಆದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ಜಿಲ್ಲಾಡಳಿತ ಹಾಗೂ ನಗರಸಭೆ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ನಗರಸಭೆಯಿಂದ ಸೂಕ್ತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಕರ್ನಾಟಕ ಜನಶಕ್ತಿ ಸಂಘಟನೆ ಸಿದ್ದರಾಜು, ರಾಜು, ದಿನೇಶ್‌ಕುಮಾರ್, ಮಹೇಶ್, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net