

ಕಾರವಾರ: ಕಟಾವು ಮಾಡುವ ವೇಳೆ ಮರ ಮುರಿದು ಬಿದ್ದು ನಗರದ ನಾಲ್ಕು ವಿದ್ಯುತ್ ಕಂಬಗಳು ಮುರಿದ ಘಟನೆ ಶುಕ್ರವಾರ ನಮನ್ ಬೇಕರಿಯ ಎದುರು ನಡೆದಿದೆ.
ತರಕಾರಿ ಅಂಗಡಿಯ ಎದುರಿಗೆ ಖಾಸಗಿ ಜಾಗದಲ್ಲಿದ್ದ ತೆಂಗಿನ ಮರ ಕಡಿಯಲು ವ್ಯಕ್ತಿಯೊಬ್ಬರು ಮರವೇರಿದ್ದರು. ಮರ ಬುಡ ಸಮೇತ ಕಿತ್ತು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ವಿದ್ಯುತ್ ಕಡಿತಗೊಳಿಸಿದ್ದರಿಂದ ಮರವೇರಿದ್ದ ವ್ಯಕ್ತಿ ಸ್ವಲ್ಪದರಲ್ಲಿ ಪಾರಾಗಿದ್ದಾನೆ. ಆದರೆ, ಮರ ಬಿದ್ದ ಪರಿಣಾಮ ಸುತ್ತಲಿನ ನಾಲ್ಕು ಕಂಬಗಳು ಮುರಿದು ಬಿದ್ದಿದ್ದವು. ನಗರಸಭೆ, ಹೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬ ದುರಸ್ತಿ ಕಾರ್ಯ ಕೈಗೊಂಡರು.