ಕಾರಿನ ಮೇಲೆ ಮರ ಬಿದ್ದು ಮಹಿಳೆ ದಾರುಣ ಸಾವು

Tree Fallen
Published on

ಕಾರವಾರ: ಹುಣಸೆ ಮರವೊಂದು ಕಾರೊಂದರ ಮೇಲೆ ಬುಡ ಸಮೇತ ಕಿತ್ತು ಬಿದ್ದು, ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಗರದ ಡಾ.ಪಿಕಳೆ ನರ್ಸಿಂಗ್ ಹೋಂ ಎದುರು ಭಾನುವಾರ ನಡೆದಿದೆ. ಮಲ್ಲಾಪುರ ಕುರ್ನಿಪೇಟೆ ಮೂಲದ ಲಕ್ಷ್ಮೀ ನಾರಾಯಣ ನಮ್ಸೇಕರ್(55) ಮೃತರು. 8 ತಿಂಗಳ ಗರ್ಭಿಣಿಯಾಗಿದ್ದ ತಮ್ಮ ಸೊಸೆ ಸುನಿತಾ ಅವರನ್ನು ಬಾಡಿಗೆ ಕಾರು ಮಾಡಿಕೊಂಡು ಡಾ.ಪಿಕಳೆ ಆಸ್ಪತ್ರೆಗೆ ತಪಾಸಣೆಗಾಗಿ ಕರೆ ತಂದಿದ್ದರು. ಕಾರು ಆಸ್ಪತ್ರೆಯ ನಿಲ್ಲಿಸುತ್ತಿದ್ದಂತೆ ಎದುರಿಗಿದ್ದ ದೊಡ್ಡ ಹುಳಸೆ ಮರ ಬಿಡ ಸಮೇತ ಕಿತ್ತು ಬೀಳುವುದು ಕಾಣಿಸಿದೆ. ತಕ್ಷಣ ಸೊಸೆ ಸುನಿತಾ ಕಾರಿನಿಂದ ಇಳಿದಿದ್ದಾರೆ. ಅವರ ಕೈಗೆ ಮರದ ದಿಮ್ಮಿ ತಾಗಿ ಯಾಗಯವಾಗಿದೆ. ಚಾಲಕ ಕೂಡ ಕಾರಿನಿಂದ ಹಾರಿ ಪ್ರಾಣ ಉಳಿಸಿಕೊಂಡರು. ಆದರೆ, ಅತ್ತೆ ಲಕ್ಷ್ಮೀ ಅವರು ಕಾರಿನ ಒಳಗೇ ಸಿಲುಕಿಕೊಂಡಿದ್ದರು. ಕಾರ್ಯಾಚರಣೆ: ನಗರಸಭೆ, ಅಗ್ನಿಶಾಮಕ, ಹೆಸ್ಕಾಂ ಹಾಗೂ ಹಲವರು ತಕ್ಷಣ ಕಾರ್ಯಾಚರಣೆ ನಡೆಸಿ, ಕಾರಿನ ಮೇಲೆ ಬಿದ್ದ ಮರ ಸರಿಸಿ, ಮಹಿಳೆಯನ್ನು ಹೊರ ತೆಗೆದು ಕ್ರಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅವರ ಪ್ರಾಣ ಉಳಿಯಲಿಲ್ಲ. ಎಂಎಲ್‌ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಸದಸ್ಯ ಡಾ.ನಿತಿನ್ ಪಿಕಳೆ, ಪೌರಾಯುಕ್ತ ಜಗದೀಶ ಹುಲಿಗೆಜ್ಜಿ, ಜಿಲ್ಲಾ ಅಗ್ನಿಶಾಮಕ ಅಽಕಾರಿ ಸುನೀಲ್ ಕುಮಾರ್ ಡಿವೈಎಸ್‌ಪಿ ಗಿರೀಶ ಎಸ್.ವಿ. ಹಾಗೂ ಇತರರು ಸ್ವತಃ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇನ್ನಷ್ಟು ಹಾನಿ: ಮರ ಕಿತ್ತು ಬಿದ್ದ ಸ್ಥಳದಲ್ಲಿ ಭಾನುವಾರದ ಸಂತೆ ನಡೆಯುತ್ತಿತ್ತು. ಹಲವು ವ್ಯಾಪಾರಿಗಳು ಅಲ್ಲಿಯೇ ವ್ಯಾಪಾರ ಮಾಡುತ್ತಿದ್ದರು. ಮರ ಬೀಳುತ್ತಿದ್ದ ಸದ್ದು ಕೇಳಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಪಕ್ಕದಲ್ಲೇ ಇದ್ದ ವಿದ್ಯುತ್ ಟ್ರಾನ್ಸ್ಫರ್ಮರ್ ಕಿತ್ತು ಬಿದ್ದಿದೆ. 5 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ತಕ್ಷಣ ವಿದ್ಯುತ್ ಕಡಿತವಾಗಿದ್ದರಿಂದ ಇನ್ನಷ್ಟು ಅನಾಹುತ ತಪ್ಪಿದೆ. ಪಕ್ಕದಲ್ಲಿದ್ದ ಒಂದು ಆಂಬುಲೆನ್ಸ್ಗೆ ಅಲ್ಪ ಹಾನಿಯಾಗಿದೆ.

ಕಾರಣರ‍್ಯಾರು...?

ನಗರದ ವಿವಿಧ ರಸ್ತೆಗಳ ಪಕ್ಕ ಸಾಕಷ್ಟು ಮರಗಳ ಕೊಂಬೆಗಳು ಒಣಗಿ ಬೀಳುವ ಹಂತದಲ್ಲಿವೆ. ಜು.6 ರಂದು ನಗರದ ಸವಿತಾ ಸರ್ಕಲ್ ಸಮೀಪದಲ್ಲಿ ಒಣಗಿದ ಮರದ ದಿಮ್ಮಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಬಿದ್ದು ಬಾಲಕಿಯೊಬ್ಬಳು ಗಾಯಗೊಂಡಿದ್ದಳು. ಜು. 11 ರಂದು ನಮನ್ ಬೇಕರಿ ಎದುರು ಒಣಗಿದ ತೆಂಗಿನ ಮರ ಕಡಿಯುವಾಗ ಕಿತ್ತು ಬಿದ್ದು 5 ವಿದ್ಯುತ್ ಕಂಬಗಳಿಗೆ, ಗೂಡ್ಸ್ ರಿಕ್ಷಾವೊಂದಕ್ಕೆ ಹಾನಿಯಾಗಿತ್ತು. ಕಾರ್ಮಿಕ ಸ್ವಲ್ಪದರಲ್ಲೇ ಅಪಾಯದಲ್ಲಿ ಪಾರಾಗಿದ್ದ. ಎರಡು ದಿನಗಳ ಹಿಂದೆ ಶಾಸಕ ಸತೀಶ ಸೈಲ್ ನಗರದಲ್ಲಿ ರೌಂಡ್ಸ್ ಹಾಕಿ ಅಪಾಯಕಾರಿ ಮರ ತೆರವು ಮಾಡುವಂತೆ ನಗರಸಭೆ ಅಽಕಾರಿಗಳಿಗೆ ಆದೇಶಿಸಿದ್ದರು. ಅಷ್ಟರಲ್ಲಿ ಅವಗಢ ಸಂವಿಸಿದೆ.

`ನಗರದ ವಿವಿಧೆಡೆ ಮರಗಳು ಬೀಳುವ ಅಪಾಯದಲ್ಲಿವೆ. ಅವುಗಳನ್ನು ತೆರವು ಮಾಡಲು ಅನುಮತಿ ನೀಡಬೇಕು ಎಂದು ಅರಣ್ಯ ಇಲಾಖೆಗೆ ಅನುಮತಿ ಕೇಳಿದ್ದೆವು. ಆದರೆ, 11 ಮರದ ಕೊಂಬೆಗಳನ್ನು ಮಾತ್ರ ಕಡಿಯಲು ಅನುಮತಿ ನೀಡಲಾಗಿದೆ. ನಾವು ಮರ ಕಡಿಯಲು ಮುಂದಾದ ತಕ್ಷಣ ಕೆಲವು ಪರಿಸರವಾದಿಗಳು ಆಕ್ಷೇಪಿಸುತ್ತ ಬರುತ್ತಾರೆ ಇಂಥ ಅನಾಹುತಗಳಾದಾಗ ಈಗ ಜವಾಬ್ದಾರ‍್ಯಾರು..?' ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಕೆಲವು ಸಾಕಷ್ಟು ಹಳೆಯ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ಅವುಗಳನ್ನು ತೆರವು ಮಾಡುವುದು ಅನಿವಾರ್ಯವಾಗಿದೆ. ಅವುಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ನಗರಸಭೆಗೆ ಅನುಮತಿ ನೀಡಬೇಕು. ನಗರದಲ್ಲಿ ಕೆಲವು ಡೋಂಗಿ ಪರಿಸರವಾದಿಗಳಿದ್ದು, ಅವರು ಮರ ತೆರವು ಮಾಡಲು ಬಿಡುತ್ತಿಲ್ಲ. ಇಂಥ ಇನ್ನೊಂದು ಅಪಾಯ ಸಂಭವಿಸಿದರೆ ನೇರವಾಗಿ ಅರಣ್ಯಾಧಿಕಾರಿಗಳು ಹಾಗೂ ಕೆಲವು ಡೋಂಗಿ ಪರಿಸರವಾದಿಗಳೇ ಹೊಣೆಗಾರರಾಗಿದ್ದಾರೆ.

ಗಣಪತಿ ಉಳ್ವೇಕರ್

ಎಂಎಲ್‌ಸಿ ,ಕಾರವಾರ

.........

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net