ಮರ ಕಡಿಯಲು ಆನ್‌ಲೈನ್ ಅನುಮತಿ

tree cutting new
Published on

ರಾಜೇಶ್ ಶೆಟ್ಟಿ ದೋಟ ಮಂಗಳೂರು
ಖಾಸಗಿ ಜಮೀನುಗಳಲ್ಲಿ ಬೆಳೆಸಿದ ಮರಗಳನ್ನು ಜಮೀನು ಮಾಲೀಕರು ಕಡಿದು ಸಾಗಾಟ ಮಾಡಲು ಅನುಮತಿಗಾಗಿ ಅರಣ್ಯ ಇಲಾಖೆ ಕಚೇರಿಗೆ ಅಲೆದಾಟ ತಪ್ಪಿಸಲು ಅರಣ್ಯ ಇಲಾಖೆ ‘ಇ-ಫೆಲ್ಲಿಂಗ್ ಆ್ಯಂಡ್ ಟ್ರಾನ್ಸಿಟ್ ಪರ್ಮಿಷನ್’ ಎಂಬ ಹೊಸ ತಂತ್ರಾಂಶ ಸಿದ್ಧಪಡಿಸಿದೆ.
ಖಾಸಗಿ ಜಾಗದಲ್ಲಿ ಬೆಳೆಸಿದ ಕೆಲಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡಬೇಕಿದ್ದರೆ ಅರಣ್ಯ ಇಲಾಖೆ ಅನುಮತಿ ಕಡ್ಡಾಯ ಎಂಬ ನಿಯಮವಿದೆ. ಈ ಅನುಮತಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿವೆ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಆನ್‌ಲೈನ್ ಪರ್ಮಿಟ್ ಮೂಲಕ ಪ್ರಕ್ರಿಯೆಯನ್ನು ಸರಳ ಹಾಗೂ ಪಾರದರ್ಶಕಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನೂತನ ತಂತ್ರಾಂಶವನ್ನು ಈಗಾಗಲೇ ‘ಟೆಕ್ ಸಮ್ಮಿಟ್’ನಲ್ಲಿ ಸಾದರಪಡಿಸಿದ್ದು, ತಿಂಗಳೊಳಗೆ ಜಾರಿಗೆ ಬರಲಿದೆ.

ಆನ್‌ಲೈನ್ ಪ್ರಕ್ರಿಯೆ: ಅರಣ್ಯ ಇಲಾಖೆ ಕೆಲವೊಂದು ಮರಗಳನ್ನು ಕಡಿಯುವುದು ಹಾಗೂ ಸಾಗಾಟಕ್ಕೆ ವಿನಾಯಿತಿ ನೀಡಿದೆ. ಈ ಮರಗಳ ಪಟ್ಟಿ ತಂತ್ರಾಂಶದಲ್ಲಿ ಲಭ್ಯವಾಗಲಿದೆ. ಪಟ್ಟಿಯಲ್ಲಿಲ್ಲದ ಮರ ಕಡಿಯಲಿಚ್ಛಿಸುವವರು ಮರದ ಫೋಟೋ, ಸ್ಥಳದ ಮಾಹಿತಿ, ಭೂಮಿಯ ದಾಖಲೆ, ಮರ ಕಡಿಯಬಯಸುತ್ತಿರುವ ಕಾರಣದೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಸಂದರ್ಭ ಅರ್ಜಿದಾರರಿಗೆ ಸಂಬಂಧಪಟ್ಟ ಅಧಿಕಾರಿಯ ವಿವರ ಹಾಗೂ ಅರ್ಜಿ ಸಂಖ್ಯೆ ಲಭ್ಯವಾಗುತ್ತದೆ. ಈ ಅರ್ಜಿ ಸಂಖ್ಯೆ ಆಧಾರದಲ್ಲಿ ಅಧಿಕಾರಿಗಳು ಜಮೀನಿಗೆ ತೆರಳಿ ಮೂಲ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ವಲಯ ಅರಣ್ಯಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಬಳಿಕ ವಲಯ ಅರಣ್ಯಾಧಿಕಾರಿ ಸೂಕ್ತವೆನಿಸಿದರೆ ಮರ ಕಡಿಯಲು ಹಾಗೂ ಸಾಗಾಟಕ್ಕೆ ಅನುಮತಿ ನೀಡುತ್ತಾರೆ. ಈ ಎಲ್ಲ ಪ್ರಕ್ರಿಯೆ ಹಂತಗಳ ಮಾಹಿತಿ ಜಮೀನುದಾರರಿಗೆ ತಂತ್ರಾಂಶದಲ್ಲಿ ಲಭ್ಯವಾಗುತ್ತದೆ.
ಮರ ಕಡಿಯುವ ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ್ದು, ಕಡಿಯಲು ಅನುಮತಿ ಇಲ್ಲದಿದ್ದಲ್ಲಿ ಅಥವಾ ಮರ ವಿನಾಶದ ಅಂಚಿನಲ್ಲಿರುವ ಪ್ರಭೇದಕ್ಕೆ ಸೇರಿದ್ದರೆ ಆಯ್ಕೆ ಸಂದರ್ಭದಲ್ಲೇ ಮರ ತೆರವು ಸಾಧ್ಯವಿಲ್ಲ ಎಂಬ ಸಂದೇಶವನ್ನು ತಂತ್ರಾಂಶ ತೋರಿಸಲಿದೆ. ಸಾಗಾಟ ಸಂದರ್ಭ ಎಲ್ಲಿಂದ-ಎಲ್ಲಿಗೆ, ಯಾವ ಮರ ಹಾಗೂ ತೆರವು ಮಾಡಿದವರ ವಿವರ ತಂತ್ರಾಂಶದಲ್ಲೇ ಲಭ್ಯವಾಗಲಿದೆ.

ಐಸಿಟಿಗೆ ಹೊಣೆ: ಅರಣ್ಯ ಇಲಾಖೆಯ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ಕೇಂದ್ರ(ಐಸಿಟಿ) ಈ ನೂತನ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಕಂದಾಯ ಇಲಾಖೆ ಸಹಯೋಗದಲ್ಲಿ ರಾಜ್ಯದ ಎಲ್ಲ ವಿಭಾಗಗಳಿಂದ ಮಾಹಿತಿ ಕ್ರೋಡೀಕರಿಸಲಾಗುತ್ತಿದೆ. ತಂತ್ರಾಂಶದ ಪ್ರಾಯೋಗಿಕ ಬಳಕೆಗೆ ಇಲಾಖೆ ಮುಂದಾಗಿದ್ದು, ವಿವಿಧ ವಿಭಾಗಗಳ ಸಲಹೆಗಳನ್ನು ಆಧರಿಸಿ ಅಂತಿಮ ರೂಪ ನೀಡಲಾಗುತ್ತಿದೆ. ಇದು ಮುಗಿದ ತಕ್ಷಣ ಜನರ ಬಳಕೆಗೆ ಲಭ್ಯವಾಗಲಿದೆ. ಕೇಂದ್ರವು ಈಗಾಗಲೇ ಇ-ಟಿಂಬರ್’ ತಂತ್ರಾಂಶ ಮೂಲಕ ಮರಮಟ್ಟುಗಳ ಖರೀದಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಡೌನ್‌ಲೋಡ್ ಹೇಗೆ?: ಮೊದಲಿಗೆ ಇ-ಫೆಲ್ಲಿಂಗ್ ಹಾಗೂ ಟ್ರಾನ್ಸಿಟ್ ಪರ್ಮಿಷನ್ ತಂತ್ರಾಂಶದ ಲಿಂಕ್ ಅನ್ನು ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಕಾಲಕ್ರಮೇಣ ಗೂಗಲ್ ಪ್ಲೇಸ್ಟೋರ್‌ನಲ್ಲೂ ಈ ಆ್ಯಪ್ ಲಭ್ಯವಾಗಲಿದೆ.

ಮರ ಕಡಿತ ಹಾಗೂ ಸಾಗಾಟ ಅನುಮತಿ ಸರಳೀಕರಣ ಹಾಗೂ ಪಾರದರ್ಶಕತೆಗಾಗಿ ‘ಇ-ಸೆಲ್ಲಿಂಗ್ ಆ್ಯಂಡ್ ಟ್ರಾನ್ಸಿಟ್ ಪರ್ಮಿಷನ್’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಪರ್ಮಿಟ್ ಪ್ರಕ್ರಿಯೆಯ ಎಲ್ಲ ಹಂತಗಳು ಅರ್ಜಿದಾರರಿಗೆ ಲಭ್ಯವಾಗಲಿದೆ. ಪ್ರಾಯೋಗಿಕವಾಗಿ ತಂದಿರುವ ಆ್ಯಪ್‌ನಲ್ಲಿನ ಲೋಪದೋಷ ಸರಿಪಡಿಸಿ ತಿಂಗಳೊಳಗೆ ಜನರ ಬಳಕೆಗೆ ಬಿಡುಗಡೆಗೊಳಿಸಲಾಗುತ್ತದೆ.- ಬಿಸ್ವಜಿತ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ಮರ ಕಟಾವು ಮತ್ತು ಸಾಗಣೆಗಾಗಿ ಯಾರಿಗೆ ಅರ್ಜಿ ನೀಡಬೇಕು ಎಂಬ ಗೊಂದಲ ರೈತರನ್ನು ಕಾಡುತ್ತಿದೆ. ಈ ತಂತ್ರಾಂಶದಲ್ಲಿ ಅರ್ಜಿದಾರರು ಸ್ಥಳದ ವಿವರ ನಮೂದಿಸಿದ ಕೂಡಲೇ ಅಧಿಕಾರಿಯ ಪೂರ್ಣ ವಿವರ ಲಭ್ಯವಾಗುತ್ತದೆ. ಇದರಿಂದ ಮರ ಕಟಾವು, ಸಾಗಾಟಕ್ಕೆ ಪರವಾನಗಿ ಪಡೆಯಲು ಅರಣ್ಯ ಇಲಾಖೆ ಕಚೇರಿಗೆ ರೈತರ, ಜಮೀನು ಮಾಲೀಕರ ಅಲೆದಾಟ ತಪ್ಪಲಿದೆ.-ಪುನಾಟಿ ಶ್ರೀಧರ್, ಅರಣ್ಯ ಕಾರ್ಯಪಡೆ ಮುಖ್ಯಸ್ಥ ((ಚಿತ್ರ: ಎಂಎನ್‌ಜಿ-27ಡಿಸ್-ಶ್ರೀಧರ್))

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net