

ಗುಂಡ್ಲುಪೇಟೆ: ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಹೊಂದಿಕೊಂಡಂತೆ ಎರಡು ಹಳೆಯ ಮರಗಳ ಕೊಂಬೆಗಳು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖೆ ತೆರವುಗೊಳಿಸದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡುವಂತಾಗಿದೆ.
ಪಟ್ಟಣದ ಹಳೇ ಆಸ್ಪತ್ರೆ ರಸ್ತೆಯ ಅರಣ್ಯ ಇಲಾಖೆಯಲ್ಲಿನ ಆವರಣ ಹಾಗೂ ಸಮೀಪದ ಗಣಪತಿ ದೇವಾಲಯ ಆವರಣದಲ್ಲಿರುವ ಶಿಥಿಲಗೊಂಡಿರುವ ಮರದ ಕೊಂಬೆಗಳು ಜೋರು ಗಾಳಿಗೆ ಮುರಿದು ಬೀಳುವ ಸಂಭವ ಹೆಚ್ಚಾಗಿದೆ. ಹೀಗಿದ್ದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹಳೇ ಆಸ್ಪತ್ರೆ ರಸ್ತೆಯಲ್ಲಿರುವ ಬರ್ ವಲಯಾರಣ್ಯ ಕಚೇರಿ ಆವರಣದಲ್ಲಿರುವ ಭಾರಿ ಗಾತ್ರದ ಮರದ ಕೊಂಬೆ ರಸ್ತೆಗೆ ಚಾಚಿಕೊಂಡಿದೆ. ಕೆಲವು ದಿನಗಳ ಹಿಂದೆ ಬಿದ್ದ ಮಳೆಗೆ ಇದೇ ಮರದ ಎರಡು ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಟ್ರಾನ್‌ಸ್ಾರ್ಮರ್ ಸುಟ್ಟುಹೋಗಿತ್ತು. ಅದೃಷ್ಟವಶಾತ್ ಈ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರ ಇಲ್ಲವಾದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಕೂಡಲೇ ಅರಣ್ಯ ಇಲಾಖೆ ಮುರಿದಿದ್ದ ಮರದ ಕೊಂಬೆಗಳನ್ನು ಕಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದೇ ಮರದಲ್ಲಿ ಶಿಥಿಲವಾಗಿರುವ ಕೊಂಬೆಯೊಂದು ರಸ್ತೆಗೆ ಚಾಚಿಕೊಂಡಿದ್ದು ಜೋರಾಗಿ ಗಾಳಿ ಬೀಸಿದರೆ ಅತ್ತಿಂದಿತ್ತ ಅಲುಗಾಡಿ ರಸ್ತೆಯಲ್ಲಿ ಸಂಚರಿಸುವವರಿಗೆ ಭೀತಿ ಹುಟ್ಟಿಸುತ್ತಿದೆ.
ಸಮೀಪದ ವಿನಾಯಕ ದೇವಾಲಯ ಆವರಣದಲ್ಲಿರುವ ಸುಮಾರು 400 ವರ್ಷಕ್ಕೂ ಹಿಂದಿನ ಅರಳಿ ಮರದ ಕೊಂಬೆಗಳೂ ರಸ್ತೆಗೆ ಚಾಚಿಕೊಂಡಿವೆ. ಗಾಳಿಯ ರಭಸಕ್ಕೆ ಅತ್ತಿಂದಿತ್ತ ತೂಗಾಡುವ ಕೊಂಬೆಗಳು ಭಾರಕ್ಕೆ ಮುರಿದು ಬೀಳುವ ಸಂಭವವಿದೆ. ಇದರ ಸಮೀಪವೇ ಜನವಸತಿ ಪ್ರದೇಶವಿದ್ದು, ಇಲ್ಲಿನ ಮನೆಗಳು, ಅಂಗಡಿ ಮಳಿಗೆಗಳವರು ಮರದ ಕೊಂಬೆಗಳ ಅಲುಗಾಟದಿಂದ ಭೀತಿಗೊಳಗಾಗಿದ್ದಾರೆ. ಒಂದು ವೇಳೆ ಕೊಂಬೆಗಳು ಮುರಿದರೆ ಕೆಳಗೆ ಹಾದುಹೋಗಿರುವ ವಿದ್ಯುತ್ ತಂತಿಗಳ ಮೇಲೆ ಬಿದ್ದು ಅನಾಹುತ ಸಂಭವಿಸಲಿದೆ.
ಆದ್ದರಿಂದ ಅರಣ್ಯ ಇಲಾಖೆ ಮತ್ತು ಸೆಸ್ಕ್ ಕಾರ್ಯಾಚರಣೆ ನಡೆಸಿ ಕೂಡಲೇ ಕೊಂಬೆಗಳನ್ನು ತೆರವುಗೊಳಿಸಿ ಸಂಭಾವ್ಯ ಅನಾಹುತ ತಪ್ಪಿಸಬೇಕು ಎಂದು 20 ದಿನಗಳ ಹಿಂದೆ ಬರ್ ವಲಯದ ಅರಣ್ಯ ಇಲಾಖೆಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆಯಾದರೂ ಕ್ರಮಕೈಗೊಂಡಿಲ್ಲ ಎಂಬುದು ಪಟ್ಟಣದ ನಿವಾಸಿ ಕೆ.ವಿ.ಶ್ರೀನಿವಾಸ್ ಆರೋಪ.
ಸದ್ಯ ಸರ್ಕಾರ ಜಾತಿ ಗಣತಿ ನಡೆಸುತ್ತಿದ್ದು ವಿದ್ಯುತ್ ಕಡಿತ ಮಾಡಿದರೆ ಗಣತಿ ಕಾರ್ಯಕ್ಕೆ ತೊಂದರೆಯಾಗುತ್ತದೆ. ಅರಣ್ಯ ಇಲಾಖೆಯವರು ಕ್ರೇನ್ ಸಹಾಯದಿಂದ ಮರದ ಕೊಂಬೆಗಳನ್ನು ಕಡಿಮೆ ಸಮಯದಲ್ಲಿ ಕತ್ತರಿಸಲು ಮುಂದಾದರೆ ಒಂದೆರಡು ಗಂಟೆ ವಿದ್ಯುತ್ ಕಡಿತ ಮಾಡಬಹುದು.
ಕೆ.ಎಂ.ಸಿದ್ದಲಿಂಗಪ್ಪ ಸೆಸ್ಕ್ ಎಇಇ
ರಸ್ತೆಗೆ ಚಾಚಿಕೊಂಡಿರುವ ಮರಗಳ ಕೊಂಬೆಗಳನ್ನು ಕತ್ತರಿಸುವಂತೆ ಸ್ಥಳೀಯರು ಮನವಿ ಮಾಡಿದ್ದು, ಇದಕ್ಕೆ ವಿದ್ಯುತ್ ಕಡಿತ ಮಾಡಿಕೊಡುವಂತೆ ಸೆಸ್ಕ್‌ಗೆ ಮನವಿ ಮಾಡಲಾಗಿದೆ.
ಶಿವಕುಮಾರ್ ಪ್ರಭಾರ ಆರ್‌ಎ್ಒ, ಬರ್ ವಲಯ