

ಭರತ್ ಶೆಟ್ಟಿಗಾರ್ ಮಂಗಳೂರು
ಪಶ್ಚಿಮ ಘಟ್ಟದ ಬೆಟ್ಟ-ಗುಡ್ಡಗಳ ಚಾರಣ ಎಷ್ಟು ಖುಷಿ ನೀಡುತ್ತದೆಯೋ ಅಷ್ಟೇ ಅಪಾಯಕಾರಿಯೂ ಆಗಿದೆ. ದಟ್ಟ ಕಾಡಿನ ನಡುವೆ ದಾರಿ ತಪ್ಪಿದರೆ ಮತ್ತೆ ಟ್ರಾೃಕ್‌ಗೆ ಮರಳುವುದು ಸುಲಭವಲ್ಲ. ಈ ಅಪಾಯ ದೂರವಾಗಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಚಾರಣಿಗರಿಗಾಗಿ ಟ್ರೆಕ್ಕಿಂಗ್ ರೂಟ್ ನಿರ್ಮಿಸಲು ಉದ್ದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಾಕಷ್ಟು ಟ್ರೆಕ್ಕಿಂಗ್ ಪೀಕ್‌ಗಳಿವೆ. ಬಹುತೇಕ ಬೆಳಗ್ಗೆ ಹೋಗಿ ಸಾಯಂಕಾಲ ಬರುವಂತಹವು. ಜಿಲ್ಲೆಯಿಂದ ಮಾತ್ರವಲ್ಲದೆ, ಹೊರ ಜಿಲ್ಲೆ, ಹೊರರಾಜ್ಯದಿಂದಲೂ ಸಾಕಷ್ಟು ಸಂಖ್ಯೆಯ ಪ್ರವಾಸಿಗರು, ಚಾರಣಿಗರು ಪಶ್ಚಿಮ ಘಟ್ಟದ ಬೆಟ್ಟ-ಗುಡ್ಡಗಳಿಗೆ ಟ್ರೆಕ್ಕಿಂಗ್‌ಗೆ ಬರುತ್ತಾರೆ.
ಹೀಗೆ ಬರುವವರ ಪೈಕಿ ಶೇ.50ರಷ್ಟು ಮಂದಿಗೆ ಮಾತ್ರ ಸರಿಯಾದ ದಾರಿ ಗೊತ್ತಿರುತ್ತದೆ ಅಥವಾ ಚಾರಣ ಸಂಸ್ಥೆಯೊಂದಿಗೆ, ಅನುಭವಿ ಚಾರಣಿಗರೊಂದಿಗೆ ಬರುತ್ತಾರೆ. ಉಳಿದವರು ಗೂಗಲ್ ಮ್ಯಾಪ್, ಇತರರು ಬರೆದಿರುವ ಬ್ಲಾಗ್, ಪತ್ರಿಕಾ ಲೇಖನ, ವೆಬ್‌ಸೈಟ್ ನೋಡಿ ಬರುತ್ತಾರೆ. ಇದರಿಂದ ಶೇ.90ರಷ್ಟು ದಾರಿತಪ್ಪುವ ಸಾಧ್ಯತೆ ಇರುತ್ತದೆ. ಪಶ್ಚಿಮ ಘಟ್ಟದ ಕಾಡಿನಲ್ಲಿ ದಾರಿತಪ್ಪುವುದು ಜೀವಕ್ಕೇ ಕುತ್ತು ತಂದಂತೆ. ದಾರಿತಪ್ಪಿದವರನ್ನು ಪತ್ತೆ ಮಾಡುವುದೂ ಸುಲಭವಲ್ಲ. ವರ್ಷದಲ್ಲಿ ಒಂದೆರಡು ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಆದ್ದರಿಂದ ವಿವಿಧ ಟ್ರೆಕ್ಕಿಂಗ್ ಪಾಯಿಂಟ್‌ಗಳಿಗೆ ರೂಟ್ ಸಿದ್ಧಪಡಿಸುವ ಅವಶ್ಯಕತೆಯಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.
ಏನಿದು ಟ್ರಕ್ಕಿಂಗ್ ರೂಟ್?: ಪಶ್ಚಿಮ ಘಟ್ಟದ ಕಾಡುಗಳ ಒಳಗೆ ಹೋಗಬೇಕಾದರೆ ಅರಣ್ಯ ಇಲಾಖೆ ಸಹಕಾರ ಅಗತ್ಯ. ಆದ್ದರಿಂದ ಚಾರಣಕ್ಕೆ ಯೋಗ್ಯವಾದ ಗುಡ್ಡ-ಬೆಟ್ಟಗಳನ್ನು ಗುರುತಿಸಿ ಅಲ್ಲಿಗೆ ತೆರಳಲು ದಾರಿ ಮಾಡಿಕೊಡುವುದು ಈ ಟ್ರೆಕ್ಕಿಂಗ್ ರೂಟ್‌ನ ಉದ್ದೇಶ. ಆದರೆ ಜೆಸಿಬಿ ಅಥವಾ ಹಾರೆ-ಗುದ್ದಲಿ ತೆಗೆದುಕೊಂಡು ಹೋಗಿ ರಸ್ತೆ ನಿರ್ಮಿಸುವುದಲ್ಲ. ಇದಕ್ಕೆ ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಗ್ರಾಮಸ್ಥರ ಮೂಲಕ ಬೆಟ್ಟಗಳಿಗೆ ತೆರಳಲು ಒಂದು ಹಾದಿ ಕಂಡು ಹಿಡಿಯುವುದು ಮತ್ತು ಪ್ರತಿ ಸಲ ಅದೇ ದಾರಿಯಲ್ಲಿ ತೆರಳುವುದು. ಸ್ಥಳೀಯರನ್ನೇ ಇದರಲ್ಲಿ ಗೈಡ್‌ಗಳಾಗಿ ನಿಯೋಜಿಸುವುದರಿಂದ, ಚಾರಣಿಗರು ಅವರ ಸಹಾಯ ಪಡೆಯಬಹುದಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಜತೆಗೆ, ಸುರಕ್ಷಿತ ಚಾರಣವೂ ಸಾಧ್ಯವಾಗಲಿದೆ.
ಜಿಲ್ಲೆಯಲ್ಲಿ ಅದೆಷ್ಟೋ ಹಿಡನ್ ಟ್ರೆಕ್ಕಿಂಗ್ ರೂಟ್‌ಗಳಿವೆ. ಒಂದಷ್ಟು ಮಂದಿ ದಾರಿ ತಪ್ಪುವುದು, ಬಳಿಕ ಪತ್ತೆಯಾಗುವುದು ಮೊದಲಾದ ಘಟನೆಗಳು ನಡೆಯುತ್ತಿರುತ್ತದೆ. ಇದನ್ನು ತಪ್ಪಿಸಲು ಟ್ರೆಕ್ಕಿಂಗ್ ರೂಟ್‌ಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಜನಪ್ರಿಯಗೊಳಿಸಲು ಉದ್ದೇಶಿಸಲಾಗಿದೆ. ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ಈಗಾಗಲೇ ಚಾರಣ ಎಂಬ ನೆಪದಲ್ಲಿ ಕಾಡಿಗೆ ಹೋಗಿ ಮೋಜು ಮಾಡಿ ಪರಿಸರ ಮಲಿನ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇಂತದಕ್ಕೆ ಮೊದಲು ಕಡಿವಾಣ ಹಾಕಬೇಕು. ಕೇವಲ ಆದಾಯ ದೃಷ್ಟಿಯಿಂದ ಚಾರಣ ರೂಟ್ ಮಾಡುವುದೆಂದರೆ ಇದು ಇನ್ನಷ್ಟು ಅಪಾಯ. ಒಂದು ರೀತಿ, ನೀತಿ, ನಿಯಮ, ನಿರ್ಬಂಧಕ್ಕೆ ಒಳಪಟ್ಟು ಪಶ್ಚಿಮ ಘಟ್ಟ ಅಧ್ಯಯನ, ಅರಿವು, ಜಾಗೃತಿ ಮಾಡುವವರಿಗೆ ಚಾರಣಕ್ಕೆ ಅನುಮತಿ ನೀಡುವುದು ಹಿತಕರ. ದಿನೇಶ್ ಹೊಳ್ಳ, ಚಾರಣಿಗ, ಪರಿಸರ ಪ್ರೇಮಿ