

ಕಳಸ: ನಾಲ್ಕು ದಿನಗಳಿಂದ ತೋಟದೂರು ಗ್ರಾಮ ಪಂಚಾಯಿತಿ ಹಿತ್ಲುಮಕ್ಕಿ ತೋಟದಲ್ಲಿ ಗಾಯಗೊಂಡು ನರಳುತ್ತಿರುವ ಕಾಡುಕೋಣಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸ್ಥಳಾಂತರಿಸಬೇಕಿದೆ.
ನಾಲ್ಕು ದಿನಗಳ ಹಿಂದೆ ಹಿತ್ಲುಮಕ್ಕಿ ರಾಜೇಂದ್ರ ಹೆಬ್ಬಾರ್ ಅವರ ತೋಟದಲ್ಲಿ ಕಾಡುಕೋಣ ಮುಂಗಾಲು ಮೂಳೆ ಮುರಿತದಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಬೆನ್ನಿನ ಹಿಂಭಾಗಕ್ಕೂ ತೀವ್ರವಾದ ಗಾಯವಾಗಿದೆ. ಹೀಗಾಗಿ ಆಹಾರವಿಲ್ಲದೆ ನರಳುತ್ತಿದೆ.
ರಸ್ತೆ ಬದಿಯಲ್ಲಿ ಮುಂಗಾಲು ಮೂಳೆ ಮುರಿತಗೊಂಡಿದ್ದ ಕಾಡುಕೋಣ ಒದ್ದಾಡಿಕೊಂಡು ತೋಟಕ್ಕೆ ಬಂದು ಸೇರಿಕೊಂಡಿದೆ. ಸುಮಾರು ಹನ್ನೆರಡು ವರ್ಷದ ಕಾಡುಕೋಣದ ಬಳಿ ಯಾರೂ ಹೋಗುವ ಧೈರ್ಯ ಮಾಡುತ್ತಿಲ್ಲ. ಹರಿಯುವ ನೀರಿನ ಬಳಿ ಇರುವುದರಿಂದ ನೀರನ್ನು ಮಾತ್ರ ಕುಡಿಯುತ್ತಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಇಲಾಖೆ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆಯೇ ವಿನಃ ಅದಕ್ಕೆ ಆಹಾರವಾಗಲಿ, ಚಿಕಿತ್ಸೆಯಾಗಲಿ ನೀಡುತ್ತಿಲ್ಲ. ಈಗಾಗಲೇ ಸಾಕಷ್ಟು ಕಾಫಿ ತೋಟವನ್ನು ನಾಶ ಪಡಿಸಿದೆ. ತೋಟದಲ್ಲಿ ಇರುವುದರಿಂದರಿಂದ ಅಡಕೆ ಕೊನೆ ಕೊಯ್ಯಲು ಬರಲು ಯಾರೂ ಒಪ್ಪುತ್ತಿಲ್ಲ.