ನಮ್ಮ ಕ್ಲಿನಿಕ್‌ಗಳಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ: ಬಿಬಿಎಂಪಿ ನಿರ್ಧಾರ

bbmp office
Published on

ಬೆಂಗಳೂರು: ನಮ್ಮ ಕ್ಲಿನಿಕ್ ಹಾಗೂ ಹೆರಿಗೆ ಆಸ್ಪತ್ರಿಗಳಲ್ಲಿ ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ನೀಡಲಿದ್ದು, ಕಾಯಿಲೆಗೆ ಒಳಗಾದವರು ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮನವಿ ಮಾಡಿದ್ದಾರೆ.

ಬಿಬಿಎಂಪಿಯು ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆ ಸಹಯೋಗದೊಂದಿಗೆ ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಪಾಲುದಾರರೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರು ನಗರದಲ್ಲಿ ಕೈಗೊಂಡಿರುವ 100 ದಿನಗಳ ಕ್ಷಯರೋಗ ಅಭಿಯಾನದಲ್ಲಿ ಈಗಾಗಲೇ 50 ದಿನಗಳು ಮುಗಿದಿವೆ. ಬಾಕಿ ಉಳಿದಿರುವ ದಿನಗಳಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು, ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿ ಕ್ಷಯ ಮುಕ್ತ ನಗರವನ್ನಾಗಿಸಲಾಗುವುದು. ಮುಖ್ಯವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ನಮ್ಮ ಕ್ಲಿನಿಕ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಕ್ಷಯಮುಕ್ತ ನಗರವನ್ನಾಗಿ ಮಾಡಲಾಗುವುದು ಎಂದರು.

ಮನೆ-ಮನೆಗೆ ಭೇಟಿ:

ಕ್ಷಯರೋಗ ನಿರ್ಮೂಲನೆಗೊಳಿಸಲು ಟಿಬಿ ರೋಗಲಕ್ಷಣ ಇರುವ ಮನೆಗಳು, ವೃದ್ಧಾಶ್ರಮಗಳು, ನಿರಾಶ್ರಿತ ಕೇಂದ್ರಗಳು, ಅನಾಥಾಶ್ರಮಗಳು, ಕೊಳೆಗೇರಿ ಪ್ರದೇಶಗಳು ಸೇರಿ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಉಚಿತವಾಗಿ ಟಿಬಿ ಪರೀಕ್ಷೆ ಮಾಡಲಾಗುವುದು. ಟಿಬಿ ರೋಗಲಕ್ಷಣಗಳನ್ನು ತೋರಿಸುವವರು ಅಥವಾ ಅಪಾಯದಲ್ಲಿರುವವರು ಪರೀಕ್ಷೆಗಾಗಿ ಕಫ ಸಂಗ್ರಹಣೆಗೆ ಒಳಗಾಗುತ್ತಾರೆ. ನಂತರ ಆ ಮಾದರಿಗಳನ್ನು ನ್ಯಾಟ್ (ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್) ಸಂಸ್ಥೆಗೆ ಕಳುಹಿಸಿ ವರದಿ ಪಡೆದೇ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ. ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿಗಳು, ಪಾಲುದಾರ ಇಲಾಖೆಗಳಾದ ಪೊಲೀಸ್ ಇಲಾಖೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಫ್ಯಾಕ್ಟರೀಸ್ ಬಾಯ್ಲರ್, ಕಾರ್ಮಿಕ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಟಿಬಿ ಪ್ರಿವೆಂಟಿವ್ ಥೆರಪಿ ಚಿಕಿತ್ಸೆ:

ಸಿವೈಟಿಬಿ ಪರೀಕ್ಷೆ ನಡೆಸಿ ಸಕ್ರಿಯ ಟಿಬಿಯನ್ನು ಪತ್ತೆಹಚ್ಚಿ ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳಿಗೆ ಟಿಬಿ ಪ್ರಿವೆಂಟಿವ್ ಥೆರಪಿ (ಟಿಪಿಟಿ) ಒದಗಿಸಲು ಅಭಿಯಾನದ ವೇಳೆ ಆದ್ಯತೆ ನೀಡಲಾಗುತ್ತಿದೆ. ಇದು ಹೊಸ ಪ್ರಕರಣಗಳನ್ನು ತಡೆಯಲು ನಿರ್ಣಾಯಕ ಪಾತ್ರ ವಹಿಸಿ ಕ್ಷಯಮುಕ್ತ ಭಾರತ ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net