

ಗಜೇಂದ್ರಗಡ: ಚರ್ಮಗಂಟು ರೋಗಬಾಧೆಯಿಂದ ಬಳುತ್ತಿರುವ ಪಟ್ಟಣದಲ್ಲಿನ ಬಿಡಾಡಿ ದನಗಳಿಗೆ ಸಂಘ-ಸಂಸ್ಥೆಗಳವರು ಲಸಿಕೆ ಕೊಡಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಪಟ್ಟಣದಲ್ಲಿ 300ಕ್ಕೂ ಅಧಿಕ ಬಿಡಾಡಿ ದನಗಳಿದ್ದು, ಅವುಗಳಲ್ಲಿ ಕೆಲವು ದನಗಳಿಗೆ ಚರ್ಮಗಂಟು ರೋಗ ಆವರಿಸಿ ಗಾಯಗಳಾಗಿ ನಿತ್ರಾಣಗೊಳ್ಳುತ್ತಿವೆ. ಹೀಗಾಗಿ, ಕಟ್ಟಿ ಬಸವೇಶ್ವರ ಯುವಕ ಮಂಡಳದವರು, ಶಿವಾಜಿ ಪೇಟೆ ಯುವಕರು ಹಾಗೂ ಎಸ್‌ಎಸ್‌ಕೆ ಸಮಾಜದ ಯುವಕರು ಸೇರಿ 100ಕ್ಕೂ ಅಧಿಕ ಬಿಡಾಡಿ ದನಗಳನ್ನು ಹಿಡಿದು ಅವುಗಳಿಗೆ ಪಶು ಆಸ್ಪತ್ರೆ ಸಿಬ್ಬಂದಿಯಿಂದ ಚಿಕಿತ್ಸೆ ಕೊಡಿಸುವ ಜತೆಗೆ ಅಗತ್ಯ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ರೋಗಬಾಧೆಯಿಂದ ಮೃತಪಟ್ಟ ಒಂದೆರಡು ದನಗಳ ಅಂತ್ಯಸಂಸ್ಕಾರ ಮಾಡಿದ್ದಾರೆ. ಕೆಲ ಓಣಿಗಳ ಯುವಕರು ದನಗಳನ್ನು ಹುಡುಕಿ ಲಸಿಕೆ ಕೊಡಿಸುತ್ತಿದ್ದಾರೆ. ವಿಜಯವಾಣಿ ಅ. 17ರಂದು ‘ಬಿಡಾಡಿ ದನಗಳಿಗೆ ಚರ್ಮಗಂಟು ಬಾಧೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.