

ಚಿಕ್ಕಮಗಳೂರು: ಹದಿಹರೆಯದ ಯುವಕ-ಯುವತಿಯರು ಆರೋಗ್ಯದಲ್ಲಿ ಯಾವುದೇ ನ್ಯೂನತೆ ಕಂಡು ಬಂದಲ್ಲಿ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯುವಂತೆ ಬೆಂಗಳೂರಿನ ರಾಷ್ಟ್ರೀಯ ಬಾಲ ಸಾಸ್ಥ್ಯ ಕಾರ್ಯಕ್ರಮದ ಉಪನಿರ್ದೇಶಕಿ ಡಾ.ವೀಣಾ ಸಲಹೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಆರ್‍ಕೆಎಸ್‍ಕೆ (ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ) ಮತ್ತು ಆರ್ ಬಿಎಸ್‍ಕೆ (ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ) ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದೆಲ್ಲೆಡೆ ಜಾಗೃತಿ
ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕ-ಯುವತಿಯರು ಪೌಷ್ಟಿಕತೆ ಕೊರತೆ, ರಕ್ತಹೀನತೆ, ಸೇರಿದಂತೆ ಹಲವು ದುಶ್ಚಟಗಳಿಗೆ ಒಳಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಇವುಗಳನ್ನು ನಿವಾರಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.
ಆಪ್ತ ಸಮಾಲೋಚನೆ
ರಾಷ್ಟೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮವು 8 ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿದ್ದು ಪ್ರಸ್ತುತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಮೂಲ ಉದ್ದೇಶ ಹದಿಹರೆಯದ ಮಕ್ಕಳಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆ ಕುರಿತು ಆಪ್ತಸಮಾಲೋಚನೆ ಮೂಲಕ ಅರಿವು ಮೂಡಿಸಿ ಸಲಹೆ ನೀಡಲಾಗುವುದು ಎಂದರು.
10 ರಿಂದ 19 ವರ್ಷದೊಳಗಿನ ಹದಿಹರೆಯದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ಬದಲಾವಣೆಗಳಾಗುತ್ತವೆ. ಅಲ್ಲದೆ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಸಮತೋಲನ ಆಹಾರ ಅವಶ್ಯಕವಾಗಿದ್ದು ಮಕ್ಕಳಿಗೆ ಇವುಗಳ ಅರಿವು ಅವಶ್ಯಕ. ಇದಕ್ಕಾಗಿ ಜಿಲ್ಲೆ ಹಾಗೂ ತಾಲೂಕು ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರ ತೆರೆಯುವ ಮೂಲಕ ಹದಿಹರೆಯದ ಮಕ್ಕಳಲ್ಲಿ ಆಗುವ ಬದಲಾವಣೆ ಕುರಿತು ಸಲಹೆ ನೀಡಲಾಗುವುದು ಎಂದರು.
ಸ್ವಾಸ್ಥ್ಯ ಸಮಾಜ ನಿರ್ಮಾಣ
ಸಮಾಜದಲ್ಲಿ ಲಿಂಗ ಅಸಮಾನತೆ, ಬಾಲ್ಯವಿವಾಹ, ಅಪೌಷ್ಟಿಕತೆ ಸೇರಿದಂತೆ ಹಲವು ಹದಿಹರೆಯದ ಸಮಸ್ಯೆಗಳ ಕುರಿತು ಸಮುದಾಯ ಜಾಗೃತಿ ಮೂಡಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.
ನೈರ್ಮಲ್ಯಕ್ಕೆ ಒತ್ತು ನೀಡಬೇಕು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ಉಮೇಶ್ ಮಾತನಾಡಿ ಮಕ್ಕಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಎಲ್ಲ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಮಾತ್ರೆ ವಿತರಿಸಲಾಗುವುದು. ಇದಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆರ್‍ಬಿಎಸ್‍ಕೆ ತಂಡಗಳನ್ನು ರಚಿಸಲಾಗಿದೆ ಎಂದರು.
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಲಾಗಿದ್ದು ಆ ಮೂಲಕ ಹದಿಹರೆಯದ ಮಕ್ಕಳು, ಕಿಶೋರಿಯರು, ಸೂಕ್ತ ಆಪ್ತ ಸಮಾಲೋಚನೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಸಮಾಜದಲ್ಲಿ ಜನತೆ ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಎಲ್ಲರ ಆರೋಗ್ಯ ಕಾಪಾಡುವುದಕ್ಕೆ ಆರೋಗ್ಯ ಇಲಾಖೆ ಬದ್ಧವಾಗಿದೆ ಎಂದರು.
ಆರೋಗ್ಯ ಸಮತೋಲನೆಗೆ ಚಿಕಿತ್ಸೆ
ಆರೋಗ್ಯಾಧಿಕಾರಿ ಡಾ.ಭರತ್ ಮಾತನಾಡಿ ಹದಿಹರೆಯದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿದ್ದಲ್ಲಿ ಕಬ್ಬಿಣಾಂಶ, ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡುವ ಮೂಲಕ ಆರೋಗ್ಯ ಸಮತೋಲನೆಗೆ ಚಿಕಿತ್ಸೆ ನೀಡಲಾಗುವುದು. ವಿಶೇಷವಾಗಿ ಋತುಮತಿಯಾದ ಹೆಣ್ಣುಮಕ್ಕಳ ಆರೋಗ್ಯ ಸುರಕ್ಷತೆ ಹಾಗೂ ಸ್ವಚ್ಚತೆಗಾಗಿ ಶುಚಿ ಪ್ಯಾಡ್‍ಗಳನ್ನು ವಿತರಿಸಲಾಗುವುದು. ಜತೆಗೆ ಸಮುದಾಯದಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.
ತಾಲೂಕುಗಳ ಆರೋಗ್ಯಾಧಿಕಾರಿಗಳು, ಶುಶ್ರೂಷಕಿಯರು, ಆರ್ ಬಿಎಸ್‍ಕೆ ವೈದ್ಯಾಧಿಕಾರಿಗಳು ಹಾಗೂ ಆರ್ ಕೆಎಸ್‍ಕೆ ಸಮಾಲೋಚಕರು ಕಾರ್ಯಕ್ರಮದಲ್ಲಿದ್ದರು.