

ಹುಬ್ಬಳ್ಳಿ: ಅನಗತ್ಯವಾಗಿ ರೋಗಿಗಳನ್ನು ಪರೀಕ್ಷೆಗೊಳಪಡಿಸಬಾರದು. ರೋಗಿ ಗಳ ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ನಂತರ ಚಿಕಿತ್ಸೆ ಕೊಡಬೇಕು. ‘ಮೊದಲು ಟ್ರೀಟ್ಮೆಂಟ್, ಆಮೇಲೆ ಪೇಮೆಂಟ್’ ಎಂಬ ನಿಯಮವನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ ಅವರು ಸಲಹೆ ನೀಡಿದರು.
ನಗರದ ಕೇಶ್ವಾಪುರದ ಶ್ರೀನಿವಾಸ ಗಾರ್ಡನ್ನಲ್ಲಿ ಭಾನುವಾರ ಏರ್ಪಡಿಸಿದ್ದ ಕಿಮ್್ಸ ಎಂಬಿಬಿಎಸ್ ವಿದ್ಯಾರ್ಥಿಗಳ 58ನೇ ಘಟಿಕೋತ್ಸವ(ಆರಾಧನಾ)ಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು. ರೋಗಿಗಳೊಂದಿಗೆ ಆಪ್ತವಾಗಿ ಮಾತನಾಡಲು ವೈದ್ಯರು ಸಂವಹನ ಕೌಶಲ ಕಲಿಯುವ ಅಗತ್ಯವಿದೆ. ಇದು ವೈದ್ಯರು ಮತ್ತು ರೋಗಿಗಳ ಮಧ್ಯೆ ಆಪ್ತ ಸಂಬಂಧವನ್ನು ಕಲ್ಪಿಸುತ್ತದೆ. ರೋಗಿಗಳ ಬಳಿ ಅವರ ಅನಾರೋಗ್ಯದ ಬಗೆಗೆ ಹಗುರವಾಗಿ ಅಥವಾ ತಮಾಷೆಯಾಗಿ ಮಾತನಾಡಬಾರದು. ನಗುಮುಖದಿಂದಲೇ ಅವರೊಂದಿಗೆ ರ್ಚಚಿಸಿ ಚಿಕಿತ್ಸೆ ಕೊಡಬೇಕು ಎಂದು ತಿಳಿವಳಿಕೆ ನೀಡಿದರು.
ಬಾಂಬೆ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಬಿ.ಸಿ. ಕಲ್ಮಠ ಮಾತನಾಡಿ, ವೈದ್ಯರು ತಮ್ಮ ವೈಯಕ್ತಿಕ ಜೀವನದ ಬಗೆಗೂ ಹೆಚ್ಚು ಗಮನಹರಿಸಬೇಕು ಎಂದರು.
ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಬಿಬಿಎಸ್ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಭಾರ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಆರ್ಎಂಒ ಡಾ. ಸಿದ್ದೇಶ್ವರ ಕಟಕೊಳ, ಸಿಎಒ ರಾಜಶ್ರೀ ಜೈನಾಪುರ, ಸಂಘಟನಾ ಸಮಿತಿಯ ಡಾ. ಕೆ.ಎಫ್. ಕಮ್ಮಾರ, ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ಸುನೀಲ ಬಿರಾದಾರ, ಡಾ. ಅಶ್ವಿನಿ ಎಚ್.ಆರ್., ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ರಾಜೇಶ್ವರಿ ಯಲಿಗಾರ, ಡಾ. ಕಸ್ತೂರಿ ಡೋಣಿಮಠ, ಡಾ. ಸಫಿಯಾ ಶೇಖ್, ಡಾ. ಪ್ರಕಾಶ ವಾರಿ, ಡಾ. ರವೀಂದ್ರ ಗದಗ, ಡಾ. ಜಿ.ಸಿ. ಪಾಟೀಲ, ಡಾ. ಎ.ಎ. ನದಾಫ್, ಇತರರು ಇದ್ದರು.
ಆರು ತಿಂಗಳವರೆಗೆ ಎಚ್ಚರ ಅಗತ್ಯ
ಭಾರತದಲ್ಲಿ ಕಳೆದ ಎರಡು ತಿಂಗಳಿಂದ ಕರೊನಾ ಕಡಿಮೆ ಆಗಿದೆ. ಎರಡನೇ ಅಲೆಯ ಭೀತಿ ಸದ್ಯ ಇಲ್ಲ. ಆದರೆ, ಮುಂದಿನ 6 ತಿಂಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ಮಾನಸಿಕವಾಗಿ ಎಲ್ಲರೂ ಸಿದ್ಧರಾಗಬೇಕು. ಕೋವಿಡ್ ವ್ಯಾಕ್ಸಿನ್ ಪಡೆಯಲು ಹಿಂಜರಿಯಬಾರದು. ಲಸಿಕೆ ಪಡೆದುದರಿಂದ ಯಾರೂ ಹೃದಯಾಘಾತಕ್ಕೆ ಒಳಗಾಗಿಲ್ಲ. ತಪ್ಪು ಕಲ್ಪನೆ ಬಿಟ್ಟುಬಿಡಿ. ಇತರ ಕಾರಣಗಳಿಂದ ಆಗಿರಬಹುದು. | ಡಾ.ಸಿ.ಎನ್. ಮಂಜುನಾಥ
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ
ಹುಬ್ಬಳ್ಳಿ ಹುಡುಗಿಗೆ 5 ಚಿನ್ನದ ಕೀರ್ತಿ
ಕಿಮ್್ಸ ಎಂಬಿಬಿಎಸ್ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಹುಬ್ಬಳ್ಳಿ ಹುಡುಗಿ ಡಾ. ಕೀರ್ತಿ ಪೈ ಅವರಿಗೆ ಐದು ಚಿನ್ನ ಹಾಗೂ 9 ವಿಶೇಷ ಪ್ರಶಸ್ತಿಗಳು ಲಭಿಸಿವೆ. ಇಲ್ಲಿನ ಅಶೋಕ ನಗರದ ನಿವಾಸಿ ತಂದೆ ಗಣೇಶ ರಾವ್ ಅವರು ಬೆಲ್ಲದ ಮೋಟರ್ಸ್ನಲ್ಲಿ ವ್ಯವಸ್ಥಾಪಕರು. ತಾಯಿ ವಿನತಾರಾವ್ ಸಿಎ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕೀರ್ತಿಯೊಬ್ಬರೇ ಮಗಳು. 10ನೇ ತರಗತಿಯಿಂದಲೇ ಕೀರ್ತಿ ಅವರಿಗೆ ಜೀವಶಾಸ್ತ್ರ ಅತ್ಯಂತ ನೆಚ್ಚಿನ ವಿಷಯ. ಆಗಲೇ ಎಂಬಿಬಿಎಸ್ ಮಾಡಬೇಕೆಂಬ ಬಯಕೆ ಚಿಗುರೊಡೆದಿತ್ತು. ಕಿಮ್ಸ್ನಲ್ಲಿ ಎಂಬಿಬಿಎಸ್ ಸೀಟ್ ಸಿಕ್ಕ ಮೇಲೆ ಅವರಿಗೆ ಸ್ವರ್ಗವೇ ಕೈಗೆ ಸಿಕ್ಕ ಅನುಭವ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಅವರು ಅತ್ಯಂತ ನಿಷ್ಠೆಯಿಂದ ಅಧ್ಯಯನ ಮಾಡಿದರು. ಪರಿಣಾಮ 5 ಚಿನ್ನದ ಪದಕ ಹಾಗೂ 9 ವಿಶೇಷ ಪ್ರಶಸ್ತಿಗಳು ಅವರ ಮುಡಿಗೇರಿವೆ. ಕಿಮ್ಸ್ನಲ್ಲಿ ತಜ್ಞ ವೈದ್ಯರು ನೀಡುತ್ತಿದ್ದ ಪಾಠ ಕಲಿಕೆಗೆ ಮತ್ತಷ್ಟು ಉತ್ಸಾಹ ತುಂಬಿತು. ಮಕ್ಕಳ ವಿಭಾಗದಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಅನುಕೂಲವಾಗಿದೆ. ಹಾಗಾಗಿಯೇ ಮುಂದೆ ಮಕ್ಕಳ ತಜ್ಞೆಯಾಗುವ ಬಯಕೆ ಇದೆ ಎನ್ನುತ್ತಾರೆ ಡಾ. ಕೀರ್ತಿ.
ಡಾ. ಶ್ವೇತಾಗೆ ಕನ್ನಡ ಸಲೀಸು
ಚೆನ್ನೈ ಮೂಲದವರಾದ ಡಾ. ಶ್ವೇತಾ ಕೆ.ಜೆ. ರಾಮನ್ ಅವರಿಗೆ ಕನ್ನಡ ಮೊದಲು ಕಠಿಣ ಭಾಷೆ. ಕಿಮ್ಸ್ಗೆ ಎಂಬಿಬಿಎಸ್ ಅಧ್ಯಯನಕ್ಕೆ ಬಂದ ಮೇಲೆ ಕನ್ನಡ ಭಾಷೆಯನ್ನು ಹಂತ ಹಂತವಾಗಿ ಕಲಿತು ಈಗ ಸುಲಲಿತವಾಗಿ ಮಾತನಾಡುತ್ತಿದ್ದಾರೆ. ಎಂಬಿಬಿಎಸ್ನಲ್ಲಿ 19 ವಿವಿಧ ವಿಷಯಗಳು ಇಂಗ್ಲಿಷ್ನಲ್ಲಿದ್ದರೂ ಕನ್ನಡದ ಪ್ರಭಾವ ಅವರನ್ನು ಆವರಿಸಿಬಿಟ್ಟಿತ್ತು. ಸಹಪಾಠಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿ ‘ಕನ್ನಡದ ಹುಡುಗಿ’ಯಾಗಿರುವ ಡಾ. ಶ್ವೇತಾ ಅವರಿಗೆ 5 ಚಿನ್ನದ ಪದಕ ಹಾಗೂ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿವಿಯ 3 ಪದಕಗಳು ಕೊರಳು ಸೇರಿವೆ. ತಂದೆ ಕೆ. ಜಾನಕಿರಾಮನ್ ಲೆಕ್ಕಪರಿಶೋಧಕರು. ತಾಯಿ ಜಿ.ವಿ. ಜಯಶ್ರೀ ಅವರು ಷೇರು ಮಾರುಕಟ್ಟೆ ಉದ್ಯೋಗಿ. ಎಐಎಂಪಿಟಿ ಪರೀಕ್ಷೆಯಲ್ಲಿ 2500ನೇ ರ್ಯಾಂಕ್ ಪಡೆದಿದ್ದ ಶ್ವೇತಾಗೆ, 2015ರಲ್ಲಿ ಕಿಮ್ಸ್ನಲ್ಲಿ ಎಂಬಿಬಿಎಸ್ ಸೀಟ್ ಸಿಕ್ಕಿತು. ಪ್ರಾಧ್ಯಾಪಕರು ನೀಡಿದ ಪಾಠ ಮನನ ಮಾಡಿಕೊಂಡು ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ. ಮುಂದೆ ಕಿವಿ, ಮೂಗು ಮತ್ತು ಗಂಟಲು ಇಲ್ಲವೇ ಮೆಡಿಸಿನ್ನಲ್ಲಿ ಎಂ.ಡಿ. ಅಧ್ಯಯನ ಮಾಡಬೇಕೆಂಬ ಬಯಕೆ ಡಾ. ಶ್ವೇತಾ ಅವರಿಗಿದೆ.
ಎಂ.ಟೆಕ್ನಲ್ಲಿ ಸಾಧನೆ
ಹುಬ್ಬಳ್ಳಿ: ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ ಇಂಜಿನಿಯರಿಂಗ್ನ ಪಾವರ್ ಸಿಸ್ಟಮ್ ವಿಭಾಗದ ವಿದ್ಯಾರ್ಥಿ ಹುಬ್ಬಳ್ಳಿಯ ಸಾತ್ವಿಕ ವಿ. ಮಠದ ಉನ್ನತ ಸಾಧನೆ ಮಾಡಿ ಚಿನ್ನದ ಪದಕ ಪಡೆದಿದ್ದಾನೆ. ಈತ ಹುಬ್ಬಳ್ಳಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿ.