

ಯಲ್ಲಾಪುರ: ತಂದೆ, ತಾಯಿ, ಗುರುಗಳು, ಅತಿಥಿಗಳು ಹಾಗೂ ರಾಷ್ಟ್ರವನ್ನು ಪ್ರೀತಿ, ಗೌರವದಿಂದ ಕಾಣುವವರು ಮಾತ್ರ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧಿನಿಯ ರಾಷ್ಟ್ರೀಯ ಮುಖ್ಯಸ್ಥ ಸು.ರಾಮಣ್ಣ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಸೇವಾ, ಅಭಾಸಾಪ, ಗೋವರ್ಧನ ಗೋಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜೀವನ ಶಿಕ್ಷಣ ಶಿಬಿರದ 5ನೇ ದಿನ ವಿಶೇಷ ಉಪನ್ಯಾಸಕರಾಗಿ ಅವರು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
‘ಪ್ರತಿಯೊಬ್ಬರೂ ತಂದೆ, ತಾಯಿಯರನ್ನು ಪ್ರೀತಿಯಿಂದ ಗೌರವಿಸಬೇಕು. ಎಂತಹ ಸಂದರ್ಭದಲ್ಲೂ ಅವರನ್ನು ಮರೆಯುವಂತಿಲ್ಲ. ನಮ್ಮ ಮನೆ ದೇವಾಲಯದಂತಿದ್ದಾಗ ನಾವು ಪ್ರಹ್ಲಾದನಂತಾಗುತ್ತೇವೆ. ಇಲ್ಲವಾದರೆ ರಾಕ್ಷಸರಾಗುತ್ತೇವೆ. ಶ್ರದ್ಧಾಭಕ್ತಿಗೆ ಎಷ್ಟು ಶಕ್ತಿಯಿದೆ ಎಂಬುದನ್ನು ಕನಕದಾಸರ ಭಕ್ತಿಯಿಂದ ಅರ್ಥ ಮಾಡಿಕೊಳ್ಳಬಹುದು. ಇಂತಹ ಮೌಲ್ಯಯುತ ಶಿಬಿರಗಳು ಜೀವನವನ್ನು ಬದಲಾವಣೆ ಮಾಡಲು ಪೂರಕವಾಗಲಿವೆ ಎಂದರು.
ಹಿರಿಯರಾದ ಸುಬ್ರಾಯ ಭಟ್ಟ ಬಗನಗದ್ದೆ, ಇತರರು ಉಪಸ್ಥಿತರಿದ್ದರು. ಸಂಘಟಕ ರಾಮಕೃಷ್ಣ ಭಟ್ಟ ಕವಡಿಕೆರೆ ಕಾರ್ಯಕ್ರಮ ನಿರ್ವಹಿಸಿದರು.