

ರಬಕವಿ-ಬನಹಟ್ಟಿ: ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಕೊಡುಗೆ ಶ್ರೇಷ್ಠವಾದುದು. ಆದ್ದರಿಂದ ಕಾರ್ಮಿಕರನ್ನು ಗೌರವಿಸುವುದರ ಜತೆಗೆ ಅವರ ಹಕ್ಕುಗಳನ್ನು ರಕ್ಷಿಸಬೇಕೆಂದು ಹಿರಿಯ ನ್ಯಾಯವಾದಿ, ಕಾರ್ಮಿಕ ಸಂಘದ ಉಪಾಧ್ಯಕ್ಷ ಎಂ.ಎಸ್. ದೇವರವರ ತಿಳಿಸಿದರು.
ಬನಹಟ್ಟಿಯ ನೇಕಾರ ಸಂಘದ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರು ದೇಶದ ಬೆನ್ನೆಲುಬಾಗಿದ್ದು, ಅವರ ಯೋಗ ಕ್ಷೇಮದ ಕುರಿತು ಪ್ರತಿಯೊಬ್ಬರೂ ಗಮನ ನೀಡಬೇಕು ಎಂದರು.
ಕಾರ್ಮಿಕ ಹೋರಾಟಗಾರ ದಿ. ಎಂ.ಐ. ಜುಮನಾಳರ ಸ್ಮರಣೆ ಕಾರ್ಯಕ್ರಮ ಜರುಗಿತು. ನಗರದಾದ್ಯಂತ ನೇಕಾರ ಕಾರ್ಮಿಕರು ದಿ. ಜುಮನಾಳ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಿದರು. ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ, ಸುರೇಶ ಕಾಡದೇವರ, ಆರ್.ಡಿ. ಹಳಿಂಗಳಿ, ಸಂಗಪ್ಪ ಕುಂದಗೋಳ, ಬ್ರಿಜ್‌ಮೋಹನ ಡಾಗಾ, ಮಹಾಂತೇಶ ಬಸಪ್ಪಗೋಳ, ಸದಾ ಮುಂಡಗನೂರ, ಶಂಕರ ಕೊಣ್ಣೂರ, ನಜೀರ ಜಮಾದಾರ, ಬಸಪ್ಪ ಕೊಣ್ಣೂರ, ಸಂಗಯ್ಯ ಬಂಗಿ ಮತ್ತಿತರರಿದ್ದರು.