ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ

SRP_04-01jpj
ಪಟ್ಟಣ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಶಿಕ್ಷಕರ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು.
Published on

ಶ್ರೀರಂಗಪಟ್ಟಣ: ವಿದ್ಯಾರ್ಥಿಗಳ ಎಳಿಗೆಗಾಗಿ ಶಿಕ್ಷಣ ಇಲಾಖೆಯಲ್ಲಿ ನಿಸ್ವಾರ್ಥವಾಗಿ ದುಡಿದ ಸಾಧಕ ಶಿಕ್ಷಕರನ್ನು ಕಾರ್ಯಕ್ರಮಗಳಲ್ಲಿ ಅಭಿನಂದಿಸುವುದು ಮಾತ್ರವಲ್ಲ, ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಕೆಲಸ ಇಲಾಖೆಯಿಂದಾಗಬೇಕು ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.


ಪಟ್ಟಣ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಶಿಕ್ಷಕರ ದಿನಾಚರಣೆ ಹಾಗೂ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಯೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ದೇಶ ಅಭಿವೃದ್ಧಿಗೆ ಶೇ.60ರಷ್ಟು ಶಿಕ್ಷಕರ ಕೊಡುಗೆ ಇದೆ. ಎಷ್ಟೋ ಶಿಕ್ಷಕರ ಮಕ್ಕಳು ಸಾಕಷ್ಟು ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ದಿನಾಚರಣೆ ಆಚರಿಸಲು ಎಲ್ಲ್ಲ ಇಲಾಖೆಗಳ ಸಹಕಾರದೊಂದಿಗೆ ಎಲ್ಲ ರೀತಿಯಲ್ಲೂ ನಾನು ಸಹಕಾರ ನೀಡಲಿದ್ದು, ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸಿದ ಸಾಧಕ ಶಿಕ್ಷಕರನ್ನು ಗೌರವಯುತವಾಗಿ ಅಭಿನಂದಿಸುವ ಕಾರ್ಯಕ್ರಮವಾಗಲಿ ಎಂದರು.
ಸೆ.15ರಂದು ನಡೆಯಲಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಗಡಿ ರಾಗಿಮುದ್ದನಹಳ್ಳಿ ಗೇಟ್‌ನಿಂದ ಸಿದ್ದಲಿಂಗಪುರ ಗಡಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 21.04 ಕಿ.ಮೀ ದೂರದವರೆಗೂ ಬೆಳಗ್ಗೆ 8ರಿಂದ 8.30ರವರೆಗೂ 30 ನಿಮಿಷಗಳ ಕಾಲ ಮಾನವ ಸಪರಪಳಿ ನಿರ್ಮಿಸುವ ಸಂಬಂಧ ಎಲ್ಲ ಇಲಾಖೆಗಳಿಗೂ ಆಯಾ ವ್ಯಾಪ್ತಿಯಲ್ಲಿ ಪ್ರತಿ 1 ಕಿ.ಮೀ.ಗೆ 800 ರಿಂದ 1 ಸಾವಿರ ಜನರ ನಿಯೋಜನೆಗೆ ಜವಾಬ್ದಾರಿ ವಹಿಸಲು ತಾಕೀತು ಮಾಡಿದರು.


ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ಇಲಾಖೆಗೂ 1 ಕಿ.ಮೀ. ಜವಾಬ್ದಾರಿ ಇದ್ದು, ಪ್ರಮುಖವಾಗಿ ಕ್ಷೇತ್ರ ಶಿಕ್ಷಣ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ, ಸಮಾಜ ಕಲ್ಯಾಣ, ಕೃಷಿ, ರೇಷ್ಮೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಪಶುಸಂಗೋಪನಾ, ಪಂಚಾಯತ್ ರಾಜ್, ಕಂದಾಯ ಇಲಾಖೆ, ಪುರಸಭೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ಲೋಕೋಪಯೋಗಿ ಇಲಾಖೆ, ನೀರಾವರಿ, ಸೆಸ್ಕ್ ಸೇರಿದಂತೆ ಇತರ ಇಲಾಖೆಗಳು ಸಹಕಾರ ನೀಡಬೇಕು. ಸೆ.8ರಂದು ಸಿದ್ಧತೆ ಕುರಿತು ಎಲ್ಲರೂ ಮಾಹಿತಿ ನೀಡಬೇಕು ಎಂದು ನಿರ್ದೇಶನ ಮಾಡಿದರು.

ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

ಎಸ್‌ಆರ್‌ಪಿ ಚಿತ್ರ :04-01

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net