

ಕೊಳ್ಳೇಗಾಲ : ನಿಗಧಿತ ಸಮಯಕ್ಕೆ ಬಾರದ ವ್ಯೆದ್ಯರು, ಶಸ್ತ್ರ ಚಿಕಿತ್ಸೆಗಳಿಗೆ ಏಜೆಂಟ್ ಮೂಲಕ ಹಣ ವಸೂಲಿ, ರೋಗಿಗಳೊಂದಿಗೆ ಶುಶ್ರೂಷಕರ ಒರಟು ವರ್ತನೆ, ಅನೈರ್ಮಲ್ಯ ಇನ್ನಿತರ ದೂರುಗಳ ಬಗ್ಗೆ ಕ್ರಮವಹಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಖಡಕ್ ಸೂಚನೆ ನೀಡಿದರು.
ಪಟ್ಟಣದ ಉಪವಿಭಾಗ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.
ವ್ಯೆದ್ಯ ವೃತ್ತಿ, ಶುಶ್ರೂಷಕರು, ಆರೋಗ್ಯ ಸಿಬ್ಬಂದಿಯನ್ನು ಜನರು ದೇವರಂತೆ ಕಾಣುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರುತ್ತಾರೆ. ಆರೋಗ್ಯಕ್ಕೆ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ಶುಶ್ರೂಷಕರು ರೋಗಿಗಳನ್ನು ಒರಟಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ದೂರಿದೆ. ಆರೋಗ್ಯ ಸಿಬ್ಬಂದಿ ತಪಾಸಣೆಗೆ ಬಂದ ರೋಗಿಗಳ ಜತೆ ಸೌಮ್ಯವಾಗಿ ನಡೆದುಕೊಳ್ಳಬೇಕು. ಬೇಸರ, ಕೋಪ ವ್ಯಕ್ತಪಡಿಸಬಾರದು. ಮಾನವೀಯತೆಯ ನೆಲಗಟ್ಟಿನಲ್ಲಿ ರೋಗಿಗಳನ್ನು ನೋಡಿ ಅವರ ಕಾಯಿಲೆಗಳನ್ನು ಗುಣಪಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಏಜೆಂಟ್‌ಗಳಿಂದ ಹಣ ವಸೂಲಿ:
ಕೊಳ್ಳೇಗಾಲ ಉಪವಿಭಾಗ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಆಸ್ಪತ್ರೆಯಲ್ಲಿ ಏಜೆಂಟ್‌ಗಳ ಹಾವಳಿ ಹೆಚ್ಚಾಗಿದೆ. ಶಸ್ತ್ರ ಚಿಕಿತ್ಸೆಗಳು ನಡೆದರೆ ಕೆಲವು ಏಜೆಂಟ್‌ಗಳು ವ್ಯೆದ್ಯರಿಗೆ ಹಣ ನೀಡಬೇಕೆಂದು ರೋಗಿಗಳಿಂದ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ಅದು ವ್ಯೆದ್ಯರಿಗೆ ಗೊತ್ತೊ ಇಲ್ಲವೋ ಗೊತ್ತಿಲ್ಲ. ಆದರೆ ಹಣ ಕಲೆಕ್ಟ್ ಆಗುತ್ತಿದೆ. ಆಸ್ಪತ್ರೆಗೆ ಬರುವ ನಸಿರ್ಂಗ್ ವಿದ್ಯಾರ್ಥಿಗಳಿಂದಲೇ ಚುಚ್ಚುಮದ್ದು, ಇಸಿಜಿ ಇನ್ನಿತರ ತಪಾಸಣೆ ಮಾಡಲಾಗುತ್ತಿದೆ. ಕೆಲವು ವ್ಯೆದ್ಯರು ರೋಗಿಗಳಿಗೆ ಹೊರಗಿನ ಮೆಡಿಕಲ್ ಶಾಪ್‌ಗಳಿಗೆ ಔಷಧಿಗಳನ್ನು ಚೀಟಿಗಳಲ್ಲಿ ಬರೆದು ಕಳುಹಿಸುತ್ತಿದ್ದಾರೆ. ರೋಗಿಗಳಿಗೆ ಸಮರ್ಪಕವಾಗಿ ಬೆಳಗಿನ ತಿಂಡಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಎ.ಆರ್.ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಆಸ್ಪತ್ರೆಗೆ ಬಡರೋಗಿಗಳು ಬರುತ್ತಾರೆ. ಅವರು ಆರ್ಥಿಕ ಸಂಕಷ್ಟದಲ್ಲಿರುತ್ತಾರೆ. ಯಾರು ಕೂಡ ರೋಗಿಗಳಿಂದ ಹಣ ವಸೂಲಿ ಮಾಡಬಾರದು. ವ್ಯೆದ್ಯರ ಹೆಸರೇಳಿ ಹಣ ವಸೂಲಿ ಮಾಡುವರ ಸಿಕ್ಕರೆ ಕ್ರಮವಹಿಸಬೇಕು. ಖಾಸಗಿ ಸ್ಕಾೃನಿಂಗ್ ಸೆಂಟರ್ ಕಳುಹಿಸಲಾಗುತ್ತಿದೆ ಎಂಬ ದೂರಿದೆ. ಇದನ್ನು ನಾನು ಸಹಿಸುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ವ್ಯೆದ್ಯೆರಿಗೆ ನೋಟಿಸ್ ನೀಡಿ:
ಎರಡು ದಿನಗಳ ಹಿಂದೆ ಹೆರಿಗೆಯಾಗಿದ್ದ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮಗುವಿನ ಸಂಬಂಧಿಯೊಬ್ಬರು ವ್ಯೆದ್ಯರನ್ನು ಸಂಪರ್ಕಿಸಲು ತೆರಳಿದ್ದಾಗ ವ್ಯೆದ್ಯರೊಬ್ಬರು ಸಕಾಲಕ್ಕೆ ಮಗುವಿನ ತಪಾಸಣೆ ಮಾಡದೆ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದರು ಎಂಬ ದೂರು ಬಂದಿದೆ. ಸೂಕ್ತ ಸಮಯಕ್ಕೆ ವ್ಯೆದ್ಯರು ಮಗುವಿನ ತಪಾಸಣೆ ಮಾಡಿದ್ದರೆ ಮಗು ಉಳಿಯುತ್ತಿತ್ತು ಎಂದು ಅಸಮಾಧಾನ ತೋಡಿ ಕೊಂಡಿದ್ದಾರೆ ಎಂದು ಆರೋಪಿಸಲಾಯಿತು.
ಮೊಬೈಲ್ ಹಿಡಿದು ಕಾಲಹರಣ ಮಾಡುತ್ತಿದ್ದ ವ್ಯೆದ್ಯ ಯಾರು ಎಂದು ಶಾಸಕರು ಪ್ರಶ್ನಿಸಿದರು. ಈ ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ ಇ ಚಿದಂಬರಂ ಹಾಗೂ ವ್ಯೆದ್ಯಾಧಿಕಾರಿ ಡಾ.ರಾಜಶೇಖರ್ ಮಗುವಿನ ಹೆರಿಗೆ ಮಾಡಿದ ವ್ಯೆದ್ಯರ ಮಾಹಿತಿ ನೀಡಿದರು. ಸ್ಥಳದಲ್ಲಿದ್ದ ವ್ಯೆದ್ಯರು ಹೆರಿಗೆ ಮಾಡಿದ್ದು ನಾನೇ ಆದರೆ, ಮಗುವಿನ ಸಂಬಂಧಿಗಳು ತಪಾಸಣೆಗೆ ಕರೆದಾಗ ನಾನು ಸ್ಥಳದಲ್ಲಿ ಇರಲಿಲ್ಲ ಎಂದು ಸಮಾಜಯಿಷಿ ನೀಡಿದರು. ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಸಕಾಲಕ್ಕೆ ಮಗುವಿನ ಆರೋಗ್ಯ ತಪಾಸಣೆ ಮಾಡಿದ್ದರೆ ಮಗು ಉಳಿಯುವ ಅವಕಾಶ ಇತ್ತು. ಮೊಬೈಲ್‌ನಲ್ಲಿ ಮಗ್ನರಾಗಿದ್ದ ವ್ಯೆದ್ಯರನ್ನು ಪರಿಶೀಲಿಸಿ ಪತ್ತೆ ಹಚ್ಚಿ ನೋಟಿಸ್ ನೀಡಿ ಕ್ರಮ ವಹಿಸುವಂತೆ ಡಿಎಚ್‌ಒಗೆ ಶಾಸಕರು ಸೂಚನೆ ನೀಡಿದರು.
ಪರಿಶೀಲಿಸಿ ಅಮಾನತ್ತು ಮಾಡಿ:
ಡಿಎಚ್‌ಒ ಚಿದಂಬರಂ ಮಾತನಾಡಿ, 6 ತಿಂಗಳ ಹಿಂದೆ ಇಬ್ಬರು ನರ್ಸ್‌ಗಳು ರೋಗಿಗಳೊಂದಿಗೆ ಒರಟಾಗಿ, ಕೋಪದ ಮನಸ್ಥಿತಿಯಲ್ಲಿ ನಡೆದುಕೊಂಡಿದ್ದಾರೆ ಎಂಬ ದೂರು ಬಂದಿತ್ತು. ಅಂಬುಲೆನ್ಸ್ ಚಾಲಕರೊಬ್ಬರು ರೋಗಿಗಳಿಗೆ ಡಿಸೇಲ್ ಇಲ್ಲ ಎಂಬ ಕಾರಣ ಹೇಳುತ್ತಿದ್ದರು ಎಂಬ ಆರೋಪವಿತ್ತು ಎಂದರು. ಅಂತಹವರಿಗೆ ನೋಟಿಸ್ ನೀಡಬೇಕು. ಸೂಕ್ತ ಸಮಜಾಯಿಷಿ ನೀಡದಿದ್ದರೆ ಅಮಾನತ್ತು ಮಾಡಬೇಕು. ಕೆಲವು ಅಂಬುಲೆನ್ಸ್ ಚಾಲಕರು ಕೆಲವು ಆಸ್ಪತ್ರೆಗಳ ಹೊಂದಾಣಿಕೆ ಮಾಡಿಕೊಂಡು ರೋಗಿಗಳನ್ನು ಕರೆದೊಯ್ಯುತ್ತಿದ್ದಾರೆ ಎಂಬ ದೂರಿದೆ ಎಂದು ಶಾಸಕರು ತಿಳಿಸಿದರು.
ಡಿಎಚ್‌ಒ ಸ್ವಂತ ಹಣದಲ್ಲಿ ಸಂಬಳ:
ಇತ್ತೀಚೆಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರ ನರ್ಸ್‌ಗಳ ಪೈಕಿ ಒಬ್ಬರನ್ನು ಹಿಂಪಡೆಯಲಾಗುತ್ತಿದೆ ಎಂದು ಶಾಸಕರ ಗಮನವನ್ನು ಡಿಎಚ್‌ಒ ತೆರೆದರು. ಇವರಿಗೆ ಸಂಬಳ ನೀಡಲು ಆದಾಯ ಇಲ್ಲದಿರುವುದರಿಂದ ಸದ್ಯಕ್ಕೆ ಅವರ 1 ತಿಂಗಳ ಸಂಬಳವನ್ನು ನೀಡುತ್ತೇನೆ ಎಂದು ಡಿಎಚ್‌ಒ ತಿಳಿಸಿದರು. ನಂತರ, ವ್ಯೆದ್ಯರು ಇದಕ್ಕೆ ಕೈಜೋಡಿಸುವ ಭರವಸೆ ನೀಡಿದರು. ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. 2023-24, 2024ರ ಜಮಾ ಖರ್ಚು, ಸ್ವಚ್ಛತೆ ರೋಗಿಗಳಿಗೆ ಊಟ-ತಿಂಡಿ ಸೇವಿಸಲು ಶೆಲ್ಟರ್ ನಿರ್ಮಾಣ, ಕುಡಿಯುವ ನೀರು, ಕ್ಯಾಟೀನ್ ಇತರೆ ವಿಚಾರ ವಗ್ಗೆ ಚರ್ಚೆಯಾಯಿತು. ಉಪವಿಭಾಗಧಿಕಾರಿ ಮಹೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯೆ ಮಾನಸ ಪ್ರಭು ಸ್ವಾಮಿ, ಡಿಎಚ್ ಒ ಚಿದಬರಂ, ಟಿ.ಎಚ್.ಒ ಗೋ ಪಾಲ್, ಡಾ.ರಾಜಶೇಖರ್, ನಗರಸಭೆ ಪೌರಯುಕ್ತ ಎ.ರಮೇಶ್, ವ್ಯೆದ್ಯರು, ಆರೋಗ್ಯ ರಕ್ಷ ಸಮಿತಿಯ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿ ಇದ್ದರು.