

ಗೋಕರ್ಣ: ಹೊಸ ಪ್ರವಾಸಿ ಸೀಸನ್ ಈಗಾಗಲೇ ಪ್ರಾರಂಭ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಆಗಮಿಸುವ ಪ್ರವಾಸಿಗರನ್ನು ಸೌಜನ್ಯಯುತವಾಗಿ ನೋಡಿಕೊಳ್ಳುವ ಮೂಲಕ ದೇಶದ ಮತ್ತು ಗೋಕರ್ಣದ ಘನತೆಯನ್ನು ಸಂರಕ್ಷಿಸುವ ಕಾರ್ಯಕ್ಕೆ ಪ್ರವಾಸೋದ್ಯಮ ವ್ಯವಹಾರ ಕೈಗೊಳ್ಳುವ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಭಟ್ಕಳ ಡಿಎಸ್‌ಪಿ ಮಹೇಶ ಕೆ.ಎಂ., ಸಲಹೆ ನೀಡಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ಕರೆದಿದ್ದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಹೋಂಸ್ಟೇ ಮುಂತಾದ ಪ್ರವಾಸೋದ್ಯಮ ಚಟುವಟಿಕೆ ನಡೆಸುವವರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಾಸ್ತವ್ಯ ಮಾಡುವ ಪ್ರತಿಯೊಬ್ಬರ ಗುರುತಿನ ಚೀಟಿ ಪಡೆದು ಪ್ರತ್ಯೇಕವಾದ ರಜಿಸ್ಟರ್‌ನಲ್ಲಿ ನಮೂದಿಸಬೇಕು. ಗಾಂಜಾ, ಚರಸ್ ಮತ್ತಿತರ ಮಾದಕ ವಸ್ತು ಹಾಗೂ ವೇಶ್ಯಾವಾಟಿಕೆ ಚಟುವಟಿಕೆ ಸೇರಿದಂತೆ ಯಾವುದೇ ಕಾನೂನು ಬಾಹಿರ ವ್ಯವಹಾರಗಳು ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಪರಿಚಿತರು, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಅನ್ಯ ರಾಜ್ಯಗಳಿಂದ ಬಂದು ಕೆಲಸ ಮಾಡುವವರ ಮಾಹಿತಿಯನ್ನು ಕಡ್ಡಾಯವಾಗಿ ಠಾಣೆಗೆ ನೀಡುವಂತೆ ಅವರು ಸೂಚಿಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ವಸಂತ ಆಚಾರ್ ಮಾತನಾಡಿ, ಬೀಚ್‌ಗಳಲ್ಲಿ ಪ್ರವಾಸೋದ್ಯಮ ವಹಿವಾಟು ನಡೆಸುವವರು ಮತ್ತು ಇನ್ನಿತರೆಡೆ ಈ ಉದ್ಯೋಗ ನಿರತರು ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ವಿವರಿಸಿದರು.
ಕಾನೂನು-ಸುವ್ಯವಸ್ಥೆ ಪಿಎಸ್‌ಐ ಖಾದರ್ ಬಾಷಾ, ತನಿಖಾ ಪಿಎಸ್‌ಐ ಶಶಿಧರ ಮತ್ತು ಸಿಬ್ಬಂದಿ ನಿರ್ವಹಿಸಿದರು.