

ಸಿದ್ದಾಪುರ: ಅಂಗವಿಕಲ ಮಕ್ಕಳನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳಬೇಕು. ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಬಿಇಒ ಕಚೇರಿಯ ಸಭಾಂಗಣದಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಿಟ್, ಎಸ್ಸೆಸ್ಸೆಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ ಪಡೆದ ಹೂಡ್ಲಮನೆ ಶಾಲಾಭಿವೃದ್ಧಿ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೆಸ್ಟ್ ಎಸ್ಡಿಎಂಸಿ ಪ್ರಶಸ್ತಿ ಪಡೆದ ತಾಲೂಕಿನ ಹೂಡ್ಲಮನೆಯ ಶಾಲೆಯ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು. ಉಳಿದ ಎಸ್ಡಿಎಂಸಿಗಳು ಇದೇ ರೀತಿ ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಶಿರಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಸಿಡಿಪಿಒ ಪೂರ್ಣಿಮಾ ದೊಡ್ಮನಿ, ಇತರರು ಉಪಸ್ಥಿತರಿದ್ದರು. ಬಿಇಒ ಎಂ.ಎಚ್.ನಾಯ್ಕ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ ನಿರೂಪಿಸಿದರು.