ಪೌರಕಾರ್ಮಿಕರನ್ನು ಗೌರವದಿಂದ ಕಾಣಲಿ

1Athani1
Published on

ಅಥಣಿ: ಪೌರ ಕಾರ್ಮಿಕರ ಕಾಯಕ ದೇವರ ಸೇವೆಯಾಗಿದೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಇಲ್ಲಿನ ಮೋಟಗಿಮಠದ ಸಭಾಂಗಣದಲ್ಲಿ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಬುಧವಾರ 101 ಪೌರ ಕಾರ್ಮಿಕರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.

ನಮ್ಮ ಹಳ್ಳಿ, ಪಟ್ಟಣ, ನಗರಗಳ ಶುಚಿತ್ವ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ. ಅವರ ಸೇವೆ ಗುರುತಿಸಿ ಶ್ರೀಮಠ ಗೌರವಿಸಿದೆ. ನಮಗೆ ಬಸವ, ಬುದ್ಧ, ಅಂಬೇಡ್ಕರ್ ಆದರ್ಶಗಳು

ಮಾದರಿಯಾಗಿವೆ ಎಂದರು.

ಮುದಗಲ್ಲ ಮಹಾಂತ ಸ್ವಾಮೀಜಿ ಮಾತನಾಡಿ, ಪೌರಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಪ್ರಭುಚನ್ನಬಸವ ಸ್ವಾಮೀಜಿ 50ನೇ ಜನ್ಮದಿನವನ್ನು ಸಮಾಜಮುಖಿಯಾಗಿ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀ ಮಠದ ಕಾರ್ಯ ನಾಡಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾಜ ಸೇವಕ ಗಜಾನನ ಮಂಗಸೂಳಿ ಮಾತನಾಡಿ, ಬಸವಣ್ಣನ ವಚನಗಳ ಆಶಯಗಳನ್ನು ನಡೆ-ನುಡಿಯಲ್ಲಿ ಆಚರಣೆಗೆ ತರುವಲ್ಲಿ ಶ್ರೀಮಠ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಶ್ರೀಗಳನ್ನು ವಿವಿಧ ಸಂಘಟನೆಗಳ ಪರವಾಗಿ ಗೌರವಿಸಲಾಯಿತು. ಹಿರಿಯರಾದ ಮುರುಗೆಪ್ಪ ತೊದಲಬಾಗಿ, ಈರಯ್ಯ ಜಗದಾಳಮಠ, ಮುರಗೆಪ್ಪ ಮಮದಾಪುರ, ಕಲ್ಲಪ್ಪ ವನಜೋಳ, ಧರೆಪ್ಪ ಠಕ್ಕಣ್ಣವರ, ರಾಜು ಟೊಪಗಿ, ರಮೇಶಗೌಡ ಪಾಟೀಲ, ಅಜ್ಜಪ್ಪ ಕಾವೇರಿ, ಶಿವು ಬುರ್ಲಿ, ಶಂಕರ ಬುಕಿಟಗಾರ, ವಿಜಯ ನೇಮಗೌಡ, ಮುರುಗೇಶ ಬಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net