

ಹುಬ್ಬಳ್ಳಿ: ನಿವೃತ್ತ ಎಎಸ್ಐ ಒಬ್ಬರ ಪೆನ್ಶನ್ ಕಾರ್ಡ್ ನೀಡಲು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಕೊನೆಗೆ 3 ಸಾವಿರ ರೂ. ಪಡೆಯುತ್ತಿದ್ದ ನಗರದ ಮಿನಿ ವಿಧಾನಸೌಧದ ಜಿಲ್ಲಾ ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹಾಗೂ ಖಜಾನಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಖಜಾನೆಯ ನಿವೃತ್ತಿ ವೇತನ ವಿಭಾಗದ ಎಫ್ಡಿಎ ಅಭಿಲಾಷ ಶ್ರೀಶೈಲ ಆಲೂರ ಹಾಗೂ ಖಜಾನಾಧಿಕಾರಿ ಪ್ರಕಾಶ ಎಸ್. ಹಳಪೇಟ ಬಂಧಿತ ಆರೋಪಿಗಳು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ನಿವೃತ್ತರಾದ ಮಲ್ಲಣ್ಣ ಬಿರಾದಾರ ದೇಸಾಯಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿ ದಾಳಿ ನಡೆಸಿದೆ.
ಮಿನಿ ವಿಧಾನಸೌಧದ ಖಜಾನಾಧಿಕಾರಿ ಕಚೇರಿಯಲ್ಲೇ ಹಣ ಪಡೆಯುತ್ತಿದ್ದಾಗ ಎಸಿಬಿ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಿದೆ. ಉತ್ತರ ವಲಯದ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದ ತಂಡ ದಾಳಿ ನಡೆಸಿದೆ. ಇನ್ಸ್ಪೆಕ್ಟರ್ ವೀರಭದ್ರಪ್ಪ ಕಡಿ, ಅಲಿ ಶೇಕ್ ಹಾಗೂ ಸಿಬ್ಬಂದಿ ಎಸ್.ಎಸ್. ಕಾಜಗಾರ, ಜಿ.ಎಸ್. ಮನಸೂರ, ಎಸ್.ಐ. ಬೀಳಗಿ, ಎಸ್.ಕೆ. ಕೆಲವಡಿ, ಕೆ.ಆರ್. ಹುಯಿಲಗೋಳ, ಎಸ್.ಎಸ್. ನರಗುಂದ, ಎಸ್. ವೀರೇಶ, ಆರ್.ಬಿ. ಯರಗಟ್ಟಿ, ವಿ.ಎಸ್. ದೇಸಾಯಿಗೌಡ್ರ ಹಾಗೂ ಗಣೇಶ ಶಿರಹಟ್ಟಿ ತಂಡದಲ್ಲಿದ್ದರು.
ಪ್ರಕರಣದ ವಿವರ: ಎಎಸ್ಐ ಮಲ್ಲಣ್ಣ ಬಿರಾದಾರ ದೇಸಾಯಿ ನಿವೃತ್ತಿ ಬಳಿಕ ತಮಗೆ ಬರಬೇಕಾದ ಡಿಸಿಆರ್ಜಿ ಹಾಗೂ ಕಮ್ಯುಟೇಶನ್ ಮೊತ್ತ 13,54,938 ರೂ. ಹಾಗೂ ಮೇ ತಿಂಗಳಿಂದ ಬರಬೇಕಾದ ಪಿಂಚಣಿ ಹಣ ಹುಬ್ಬಳ್ಳಿಯಲ್ಲಿ ದೊರೆಯುವಂತೆ ಮಾಡಲು ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಎಜಿ ಕಚೇರಿಯಿಂದ ಜುಲೈ 2ರಂದೇ ಅನುಮತಿ ದೊರೆತಿತ್ತು. ಈ ಬಗ್ಗೆ ವಿಚಾರಿಸಲು ಮಲ್ಲಣ್ಣ ನಾಲ್ಕೈದು ಬಾರಿ ಕಚೇರಿಗೆ ಹೋದರೂ ಏನೇನೋ ಕಾರಣ ಹೇಳಿ ಕಳುಹಿಸಿದ್ದರು. ಬಳಿಕ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 3 ಸಾವಿರ ರೂ.ಗೆ ವ್ಯವಹಾರ ಕುದುರಿಸಿದ್ದರು.