

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಲವು ಕಡೆಗಳಲ್ಲಿ ದೇವಸ್ಥಾನಗಳಲ್ಲಿನ ಕಾಣಿಕೆ ಹುಂಡಿಗಳ ಕಳವು ಪ್ರಕರಣಗಳು ನಡೆಯುತ್ತವೇ ಇವೆ, ಏತನ್ಮಧ್ಯೆ ಹಲವು ದೇಗುಲಗಳಲ್ಲಿ ನಿಧಿಗಳ್ಳರ ಹಾವಳಿಯೂ ಮುಂದುವರೆದಿದೆ. ಆದರೆ ಇದುವರೆಗೆ ಕಾಣಿಕೆ ಹುಂಡಿ ಕಳ್ಳರಾಗಲಿ, ನಿಧಿಗಳ್ಳರಾಗಲಿ ಸಿಕ್ಕಿಬಿದ್ದಿಲ್ಲದಿರುವುದು ಇಂಥ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯೊಂದರಲ್ಲಿ ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಎರಡು ಕಡೆ ನಿಧಿಗಳ್ಳರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಪುರಾತನ ಛತ್ರ ವಿರೂಪ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಯದ್ದಲಹಳ್ಳಿ ಸಮೀಪವಿರುವ ಬೆನಕನಹಳ್ಳ ಶ್ರೀ ಬೆನಕಪ್ಪಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಾಮಾಚಾರ ನಡೆಸಿರುವ ನಿಧಿ ಕಳ್ಳರು ಪುರಾತನ ಛತ್ರ ವಿರೂಪಗೊಳಿಸಿ ಹಳ್ಳ ತೆಗೆದು ನಿಧಿಗಾಗಿ ಹುಡುಕಾಟ ನಡೆಸಿರುವ ಪ್ರಕರಣ ನಡೆದಿದೆ. ನಿರ್ಜನ ಪ್ರದೇಶದಲ್ಲಿರುವ ಬೆನಕಪ್ಪ ದೇವಾಲಯದ ಛತ್ರದಲ್ಲಿ ನಿಧಿ ಶೋಧಕ್ಕಾಗಿ ದಿಗ್ಭಂಧನ, ಪೂಜೆ, ಮಾಟ, ಮಂತ್ರ ಮಾಡಲಾಗಿದೆ. ಗುಂಡಿ ತೋಡಿ ಕುಡಿಕೆ, ಅರಿಶಿಣ, ಕುಂಕುಮ ಹಾಗೂ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಉಪಯೋಗಿಸಿ ಶೋಧಕಾರ್ಯ ನಡೆಸಿದ್ದಾರೆ. ಈ ಪ್ರಕರಣದಿಂದ ದೇವಾಲಯದ ಬಳಿ ಗ್ರಾಮಸ್ಥರು ತೆರಳಲು ಭಯಬೀಳುವಂತಾಗಿದೆ.
ಅಮವಾಸ್ಯೆಗಳಂದು ವಾಮಚಾರ: ಸಾಮಾನ್ಯವಾಗಿ ಅಮವಾಸ್ಯೆ ದಿನಗಳಂದು ಕೃತ್ಯಕ್ಕೆ ಕೈಹಾಕುವ ದುಷ್ಕರ್ಮಿಗಳು ಪುರಾತನ ದೇಗುಲಗಳನ್ನು ಹಾಳುಗೆಡುವುತ್ತಿದ್ದಾರೆ. ವಾಮಾಚಾರದಂತ ಕೃತ್ಯ ನಡೆಸುವುದರಿಂದ ಭಕ್ತರು ದೇಗುಲಗಳ ಬಳಿ ಹೋಗುವುದಕ್ಕೆ ಹಿಂದೇಟುಹಾಕುವಂತಾಗಿದೆ. ಇದರಿಂದ ಜನರ ಧಾರ್ಮಿಕತೆಗೆ ಧಕ್ಕೆ ತರುವಂತಾಗಿದೆ. ಇದೇ ಮಾದರಿಯಲ್ಲಿ ದೇವನಹಳ್ಳಿ, ಹೊಸಕೋಟೆ ತಾಲೂಕಿನ ಕೆಲವು ಪುರಾತನ ದೇಗುಲಗಳಲ್ಲಿ ನಿಧಿ ಕಳ್ಳರು ಕೃತ್ಯ ಎಸಗಿದ ಪ್ರಕರಣ ಕಂಡುಬಂದಿವೆ, ಇಂಥವರನ್ನು ಪತ್ತೆ ಹಚ್ಚಿ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.
ಕಲ್ಲಿನ ಮೂರ್ತಿ ಅಪಹರಿಸಿದ್ದರು: ಇತ್ತೀಚಿಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಘಾಟಿ ಸುಬ್ರಹ್ಮಣ್ಯ ರಸ್ತೆಯ ದೇವರ ಬೆಟ್ಟದಲ್ಲಿರುವ ಗುಟ್ಟೆನರಸಿಂಹಸ್ವಮಿ ದೇವಾಲದಲ್ಲೂ ಇದೇ ಮಾದರಿಯ ಶೋಧ ನಡೆಸಿ ದೇವರ ಕಲ್ಲಿನ ಮೂರ್ತಿಯನ್ನೇ ಅಪಹರಿಸಿದ್ದರು. ವಿಗ್ರಹದ ತಳಭಾಗದಲ್ಲಿ ಮಣ್ಣು ಅಗೆದಿದ್ದರು. ಪ್ರತಿ ವರ್ಷ ಶಿವರಾತ್ರಿ ಜಾಗರಣೆ ಹಾಗೂ ಕಾಮನ ಹಬ್ಬ ದಿನ ಕದಿರಿ ಹುಣ್ಣುಮೆ ದಿನದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ, ಅದೇ ರೀತಿ ಕಳೆದ ಬಾರಿಯೂ ಶಿವರಾತ್ರಿ ದಿನ ದೇವಸ್ಥಾನದ ಬಳಿ ಜಾಗರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸ್ಥಳದ ಪರಿಶೀಲನೆ ತೆರಳಿದಾಗ ನಿಧಿ ಕಳ್ಳರ ಕೃತ್ಯ ಕಂಡುಬಂದಿತ್ತು.
ಜಾತ್ರೆಗಳ ಬಳಿಕ ಕೃತ್ಯ: ಇತ್ತೀಚಿನ ಕೆಲವು ಹುಂಡಿ ಕಳವು ಪ್ರಕರಣಗಳು ಸಾಮಾನ್ಯವಾಗಿ ಜಾತ್ರಾ ಮಹೋತ್ಸವಗಳು ನಡೆದ ಎರಡ್ಮೂರು ದಿನಗಳ ಅವಧಿಯಲ್ಲಿ ನಡೆದಿವೆ. ಜಾತ್ರಾ ಉತ್ಸವಗಳನ್ನು ಸಾವಿರಾರು ಭಕ್ತರು ಪಾಲ್ಗೊಳ್ಳುವುದರಿಂದ ಕಾಣಿಕೆ ಹುಂಡಿಯಲ್ಲಿ ದೊಡ್ಡಮೊತ್ತದ ಕಾಣಿಕೆ ಸಂಗ್ರಹವಾಗುತ್ತದೆ ಎಂಬುದು ಕಳ್ಳರ ಲೆಕ್ಕಾಚಾರವಾಗಿದೆ. ಈಗಾಗಲೇ ಜಾತ್ರೆ, ಉತ್ಸವಗಳು ಆರಂಭವಾಗಿದ್ದು ಇನ್ನೆರಡು ತಿಂಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ಸವಗಳು ನಡೆಯಲಿವೆ. ಕಾಣಿಕೆ ಕಳ್ಳರ ಕಣ್ಣು ಹುಂಡಿಗಳ ಮೇಲೆ ಬಿದ್ದಿರುತ್ತದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ.
ಪುರಾತನ ದೇಗುಲಗಳಲ್ಲಿ ನಿಧಿ ಇರುತ್ತದೆ ಎಂದು ಹಲವು ದುಷ್ಕರ್ಮಿಗಳು ಇಂಥ ಕೃತ್ಯ ಎಸಗುತ್ತಿದ್ದಾರೆ, ಇದು ಜನರ ಧಾರ್ಮಿಕ ಭಾವನೆಯನ್ನು ಕೆರಳುವಂತೆ ಮಾಡುತ್ತಿದೆ, ಪುರಾತನ ದೇಗುಲಗಳಿಗೆ ಐತಿಹಾಸಿಕ ಮಹತ್ವ ಇರುತ್ತದೆ, ಇಂಥ ದೇಗುಲಗಳಲ್ಲಿ ನಿಧಿ ಹೆಸರಿನಲ್ಲಿ ದೇವರ ಮೂರ್ತಿಗಳನ್ನು ಭಿನ್ನಗೊಳಿಸುವುದು ದೇಗುಲಗಳನ್ನು ವಿರೂಪಗೊಳಿಸುವುದು ಭಕ್ತರಲ್ಲಿ ಸಾಕಷ್ಟು ನೋವು ಉಂಟುಮಾಡುತ್ತದೆ ಜತೆಗೆ ವಾಮಾಚಾರದಂಥ ಕೃತ್ಯ ಜನರಲ್ಲಿ ಭೀತಿ ಮೂಡಿಸುತ್ತಿದೆ.
ಸಂಗಮೇಶ್, ದೊಡ್ಡಬಳ್ಳಾಪುರ