

ಗಂಗಾವತಿ: ತಾಲೂಕಿನ ಮಲ್ಲಾಪುರ ಮತ್ತು ಸಿದ್ದಿಕೇರಿ ಬೆಟ್ಟದ ಮಧ್ಯ ಭಾಗದಲ್ಲಿರುವ ಐತಿಹಾಸಿಕ ಪ್ರಸಿದ್ಧ ವಾಣಿ ಭದ್ರೇಶ್ವರ ದೇವಾಲಯದ ಲಿಂಗವನ್ನು ಅಪಹರಿಸಲಾಗಿದ್ದು, ನಿಧಿ ಆಸೆಗಾಗಿ ಧ್ವಂಸಗೊಳಿಸಿರುವ ಶಂಕೆ ವ್ಯಕ್ತವಾಗಿದೆ.
ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದ್ದು, ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಎಂಟು ದಿಕ್ಕುಗಳಲ್ಲಿ ಸ್ಥಾಪಿಸಿರುವ ದೇವಾಲಯಗಳಲ್ಲಿ ವಾಣಿಭದ್ರೇಶ್ವರ ದೇವಾಲಯ ವಿಶೇಷತೆ ಹೊಂದಿದೆ.
ಏಳು ಬೆಟ್ಟಗಳನ್ನು ಹೊಂದಿರುವ ದೇವಾಲಯವೂ ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಗುಲದ ಮೇಲ್ಭಾಗದ ಲಿಂಗ ಮೂರ್ತಿ ಕಿತ್ತಲಾಗಿದ್ದು, ಪೂಜಾರಿಯೊಬ್ಬರನ್ನು ನೇಮಿಸಿದ್ದರೂ ಲಿಂಗ ಧ್ವಂಸಗೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ.
ಅದೇ ಜಾಗದಲ್ಲಿ ಇನ್ನೊಂದು ಲಿಂಗವೊಂದನ್ನಿಡಲು ಪೂಜಾರಿ ಚಂದ್ರಮೌಳಿ ಎಂಬುವರು ಯತ್ನಿಸಿರುವ ಬಗ್ಗೆ ಭಕ್ತರು ಹೇಳಿಕೊಂಡಿದ್ದು, ಸಮರ್ಪಕ ಉತ್ತರ ನೀಡುತ್ತಿಲ್ಲ. ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಐತಿಹಾಸಿಕ ಪ್ರಸಿದ್ಧ ದೇವಾಲಯದಲ್ಲಿ ಲಿಂಗ ಅಪಹರಣವಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ವಾಮಾಚಾರಕ್ಕಾಗಿ ಕಿತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ. ಐತಿಹಾಸಿಕ ಪ್ರಸಿದ್ಧ ದೇವಾಲಯದ ರಕ್ಷಣೆಗೆ ಸರ್ಕಾರ ವಿಶೇಷ ಕಾರ್ಯ ಪಡೆ ರಚಿಸುವಂತೆ ನಯೋಪ್ರಾ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ ಮತ್ತು ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಒತ್ತಾಯಿಸಿದ್ದಾರೆ.