ಪಾಕ್​ ಪರ ಘೋಷಣೆ ಕೂಗಿದವರ ವಿರುದ್ಧ ಹುಬ್ಬಳ್ಳಿಯಲ್ಲಿ ಬುಗಿಲೆದ್ದ ಆಕ್ರೋಶ; ವಿದ್ಯಾರ್ಥಿಗಳ ಪ್ರತಿಭಟನೆ, ವಕೀಲರ ಸಾಥ್​

ABVP
Published on

ಹುಬ್ಬಳ್ಳಿ: ಖಾಸಗಿ ಇಂಜಿನಿಯರಿಂಗ್​ ಕಾಲೇಜ್​ನಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳ ವಿರುದ್ಧ ನಗರದಲ್ಲಿ ಆಕ್ರೋಶ ಭುಗಿಲೆದ್ದಿದೆ.

ನಗರದ ಹಲವೆಡೆ ಪ್ರತಿಭಟನಾ ಕಾವು ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ತರಗತಿಗಳನ್ನು ಬಹಿಷ್ಕಾರ ಮಾಡಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

ಪ್ರತಿಭಟನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಎಚ್ಚರಿಸಿದ್ದಾರೆ. ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ವಿದ್ಯಾರ್ಥಿಗಳ ಪ್ರತಿಭಟನೆಗೆ ನ್ಯಾಯವಾದಿಗಳು ಸಾಥ್ ನೀಡಿದರು. ಪ್ರತಿಭಟನೆಯಲ್ಲಿ ದೇಶದ್ರೋಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದ ಕಾಶ್ಮೀರ ಮೂಲದ ಅಮಿರ್​, ಬಾಸಿಬ್​ ಮತ್ತು ತಾಲಿಬ್​ ತಮ್ಮ ಹಾಸ್ಟೆಲ್​ ರೂಮಿನಲ್ಲಿ ಕುಳಿತುಕೊಂಡು ಪಾಕಿಸ್ತಾನ ಪರವಾಗಿ ಘೋಷಣೆ ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ದೇಶದೊಳಗಿದ್ದು ದೇಶದ್ರೋಹಿ ಚಿಂತನೆ ನಡೆಸಿದ್ದ ಅವರನ್ನು ಬಂಧಿಸಿ, ಬಿಡುಗಡೆ ಮಾಡಿದ್ದರು.

ಈ ಕುರಿತು ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net