

ಮೈಸೂರು: ಲಾಕ್‌ಡೌನ್ ಸಡಿಲಗೊಳಿಸಿದ ನಂತರ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಬಸ್ ಸಂಚಾರ ಮಂಗಳವಾರದಿಂದ ಪ್ರಾರಂಭಗೊಂಡಿದ್ದು, ಮೊದಲ ದಿನ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ನಡುವೆ ಬೆಂಗಳೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಯಾಣ ಬೆಳೆಸಿದರಾದರೂ, ಉಳಿದ ಜಿಲ್ಲೆಗಳಿಗೆ ಪ್ರಯಾಣಿಸುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಒಂದು ಬಸ್‌ನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವ ಮುನ್ನ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೆ ಸುರಕ್ಷತಾ ಕ್ರಮವಾಗಿ ಮಾಸ್ಕ್ ಧರಿಸುವುದರ ಜತೆಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು.
ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆಯಲಾಗುತ್ತಿದೆ. ಒಂದು ವೇಳೆ ಬಸ್‌ನಲ್ಲಿ ಪ್ರಯಾಣಿಸಿದವರ ಪೈಕಿ ಯಾರಿಗಾದರು ಕರೊನಾ ಇರುವುದು ದೃಢಪಟ್ಟರೆ ಉಳಿದವರಿಗೆ ಮಾಹಿತಿ ನೀಡಿ ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ಇದರಿಂದ ಸಹಕಾರಿಯಾಗಲಿದೆ.
ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಬಸ್ ಸಂಚಾರ ಮಾಡಲಿದೆ. ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7ಕ್ಕೆ ಬಸ್‌ಗಳು ಹೊರಡಲು ಸಿದ್ಧವಾಗಿದ್ದವು. ಆದರೆ, ಪ್ರಯಾಣಿಕರ ಕೊರತೆಯಿಂದ ಬೆಳಗ್ಗೆ 8ರ ನಂತರ ಬಸ್ ಸಂಚಾರ ಪ್ರಾರಂಭಗೊಂಡಿತು.
ಆ ನಂತರ ಸಾಕಷ್ಟು ಸಂಖ್ಯೆಯಲ್ಲಿ ಜನರು ಗ್ರಾಮಾಂತರ ಬಸ್ ನಿಲ್ದಾಣದ ಕಡೆ ಮುಖ ಮಾಡಿದರು. ಒಂದು ಹಂತದಲ್ಲಿ ಪ್ರಯಾಣಿಕರ ಸರತಿ ಸಾಲು ಲಷ್ಕರ್ ಪೊಲೀಸ್ ಠಾಣೆವರೆಗೆ ತಲುಪಿದಾಗ ಬೆಂಗಳೂರಿಗೆ ಪ್ರಯಣಿಸುವ ಪ್ರಯಾಣಿಕರಿಗೆ ಪ್ರತ್ಯೇಕ ಸಾಲು ಮಾಡಲಾಯಿತು. ಅಲ್ಲದೆ ಒಟ್ಟು ಐದು ಸಾಲುಗಳನ್ನು ರಚಿಸಿ ಬೇಗನೆ ಪರಿಶೀಲನಾ ಕಾರ್ಯ ನಡೆಸಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಯಿತು.
ಪ್ರಸ್ತುತ ಅಂತರ ಜಿಲ್ಲಾ ಬಸ್ ಸೇವೆ ಮಾತ್ರ ಪ್ರಾರಂಭಗೊಂಡಿದ್ದು, ಅಂತಾರಾಜ್ಯ ಸೇವೆ ಪ್ರಾರಂಭಗೊಂಡಿಲ್ಲ. ಕರ್ನಾಟಕ ಸಾರಿಗೆ, ರಾಜಹಂಸ ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಯಾವುದೇ ಹವಾನಿಯಂತ್ರಿತ ಬಸ್‌ಗಳು ಸಂಚರಿಸುತ್ತಿಲ್ಲ.
ಕಾಣದ ಸಾಮಾಜಿಕ ಅಂತರ: ಬಸ್ ನಿಲ್ದಾಣದಲ್ಲಿ ಮಾತ್ರ ಜನರು ಪರಸ್ಪರ ಅಂತರ ಕಾಯ್ದುಕೊಂಡರು. ಆದರೆ, ನಿಲ್ದಾಣದಿಂದ ಹೊರ ಭಾಗದಲ್ಲಿ ನಿರ್ಮಾಣವಾಗಿದ್ದ ಸರತಿ ಸಾಲಿನಲ್ಲಿ ಜನರು ಅಂತರ ಕಾಯ್ದುಕೊಳ್ಳದೆ ಇರುವುದು ಕಂಡು ಬಂತು. ಬಸ್‌ನಲ್ಲಿ 10 ವರ್ಷದೊಳಗಿನ ಮಕ್ಕಳು ಹಾಗೂ ವಯೋವೃದ್ಧರು ತೆರಳಲು ಅವಕಾಶ ನೀಡಲಿಲ್ಲ. ಅಲ್ಲದೆ ನಗರದಿಂದ ಬೆಂಗಳೂರು ಸೇರಿ ವಿವಿಧ ಕಡೆಗೆ ಮಕ್ಕಳು ಪಾಲಕರೊಂದಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು.
ಬಸ್ ಸಂಚಾರ ಮಾ.22 ರಿಂದ ಸ್ಥಗಿತಗೊಂಡಿತ್ತು. ಸುಮಾರು ಎರಡು ತಿಂಗಳ ನಂತರ ಸಂಚಾರ ಪ್ರಾರಂಭಗೊಂಡಿದೆ. ನಗರದಿಂದ ಬೆಂಗಳೂರಿಗೆ ಬೆಳಗ್ಗೆ 8ಕ್ಕೆ ಪ್ರಥಮ ಬಸ್ ಹೊರಟ ಸಂದರ್ಭ ಜನರು ತಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು. ನಿಲ್ದಾಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಭೇಟಿ ನೀಡಿ ನಿಲ್ದಾಣದಲ್ಲಿ ಕೈಗೊಂಡಿರುವ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ನಗರ ನಿಲ್ದಾಣ ಭಣಭಣ
ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರು. ಆದರೆ, ನಗರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಭಣಗುಡುತ್ತಿತ್ತು. ಬೆರಳೆಣಿಕೆಯಷ್ಟು ಜನರು ಮಾತ್ರ ನಿಲ್ದಾಣಕ್ಕೆ ಆಗಮಿಸಿದ್ದರು. ಇದರಿಂದಾಗಿ ಪ್ಲಾಟ್ ಫಾರ್ಮ್‌ನಲ್ಲಿ ಜನರೇ ಇರಲಿಲ್ಲ. ಹೀಗಾಗಿ ಕೆಲವೊಂದು ಬಸ್‌ನಲ್ಲಿ ಕೇವಲ 10 ರಿಂದ 15 ಪ್ರಯಾಣಿಕರು ಮಾತ್ರ ಕಂಡು ಬಂದರು. ಜನರು ನಗರದಲ್ಲಿ ಸಂಚರಿಸಲು ಖಾಸಗಿ ವಾಹನಗಳನ್ನು ಬಳಕೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಪ್ರಯಾಣಿಕರ ಗಮನಕ್ಕೆ
ಬಸ್‌ಗಳು ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಮಾತ್ರ ಸಂಚರಿಸಲಿವೆ. ಹಾಗಂತ ರಾತ್ರಿ 7 ಗಂಟೆಗೆ ನಿಲ್ದಾಣಕ್ಕೆ ತೆರಳಿದರೆ ಯಾವುದೇ ಬಸ್‌ಗಳು ಇರುವುದಿಲ್ಲ. ರಾತ್ರಿ 7 ಗಂಟೆ ಪ್ರಯಾಣವನ್ನು ಮುಗಿಸುವ ಅವಧಿಯಾಗಿದೆ. ಉದಾಹರಣೆಗೆ ಬೆಂಗಳೂರಿಗೆ ಕೊನೆಯ ಬಸ್ ಸಂಜೆ 4ಕ್ಕೆ ಹೊರಟು ಬೆಂಗಳೂರಿಗೆ 7ಕ್ಕೆ ತಲುಪುತ್ತದೆ. ಕೆ.ಆರ್.ನಗರಕ್ಕೆ ಹೊರಡುವ ಬಸ್ ನಗರದಿಂದ ಸಂಜೆ 6ಕ್ಕೆ ಹೊರಟು ಕೆ.ಅರ್. ನಗರಕ್ಕೆ ರಾತ್ರಿ 7ಕ್ಕೆ ತಲುಪುತ್ತದೆ.
ಚಾಮರಾಜನಗರಕ್ಕಿಲ್ಲ ಬಸ್
ಹಸಿರು ವಲಯದಲ್ಲಿರುವ ಚಾಮರಾಜನಗರಕ್ಕೆ ಹೊರ ಜಿಲ್ಲೆಯಿಂದ ಆಗಮಿಸುವ ಪ್ರಯಾಣಿಕರ ಮೂಲಕ ಕರೊನಾ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಮೈಸೂರಿನಿಂದ ಚಾಮರಾಜನಗರ ಕಡೆಗೆ ಯಾವುದೇ ಬಸ್‌ಗಳು ತೆರಳಲಿಲ್ಲ.
ಖಾಸಗಿ ಬಸ್ ಸಂಚಾರವಿಲ್ಲ
ಖಾಸಗಿ ಬಸ್ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗಿದ್ದು, ಒಂದು ಬಸ್‌ನಲ್ಲಿ 30ಕ್ಕಿಂತ ಹೆಚ್ಚು ಜನರು ಪ್ರಯಾಣಿಸುವಂತಿಲ್ಲ. ಆದರೆ, ಅಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ದರೆ ನಷ್ಟ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ನಗರದ ಹಳೇ ಆರ್‌ಎಂಸಿ ಬಳಿ ಇರುವ ಖಾಸಗಿ ಬಸ್ ನಿಲ್ದಾಣ ಮಂಗಳವಾರ ಭಣಗುಡುತ್ತಿತ್ತು.
ನಗರದಿಂದ ವಿವಿಧ ಜಿಲ್ಲೆಗಳಿಗೆ ಪ್ರಸ್ತುತ 100 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಬಸ್‌ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುವುದು. ಆದರೆ, ಒಂದು ಬಸ್‌ನಲ್ಲಿ 30ಕ್ಕಿಂತ ಹೆಚ್ಚು ಜನರು ಪ್ರಯಾಣಿಸಲು ಅವಕಾಶ ನೀಡುವುದಿಲ್ಲ. ಪ್ರತಿಯೊಂದು ಬಸ್‌ಗಳು ತಡೆರಹಿತವಾಗಿದ್ದು, ನಡುವೆ ಯಾವುದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ.
ಅಶೋಕ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗ
ಒಂದು ಬಸ್‌ನಲ್ಲಿ 30 ಜನರು ಪ್ರಯಾಣಿಸಲು ಅವಕಾಶ ಇದೆ. ಆದರೆ, ಕೆಲವು ಬಸ್‌ಗಳಲ್ಲಿ 10 ರಿಂದ 15 ಮಂದಿ ಮಾತ್ರ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಸ್ತುತ 68 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ಬಸ್‌ಗಳನ್ನು ಒದಗಿಸಲಾಗುವುದು. ಒಂದು ವೇಳೆ ನಗರದ ಯಾವುದಾದರೊಂದು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದು ಕಂಡು ಬಂದರೆ ಅಲ್ಲಿಗೆ ವಿಶೇಷ ಬಸ್ ಕಳುಹಿಸಿಕೊಡಲಾಗುವುದು.
ನಾಗರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ನಗರ ವಿಭಾಗ