

ಗುಂಡ್ಲುಪೇಟೆ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಗೆ ಹೋಗುವ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.
ಕಾವೇರಿ ವಿವಾದವಿರುವ ತಮಿಳುನಾಡು ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದರು. ಬೆಳಗ್ಗೆ 8 ಗಂಟೆವರೆಗೂ ಕರ್ನಾಟಕ ನೋಂದಣಿ ವಾಹನಗಳನ್ನು ತಮಿಳುನಾಡಿಗೂ ಅಲ್ಲಿಯ ವಾಹನಗಳನ್ನು ರಾಜ್ಯದೊಳಗೆ ಬಿಟ್ಟುಕೊಳ್ಳದೆ ನಿರ್ಬಂಧಿಸಲಾಗಿತ್ತು. ಊಟಿ ಹಾಗೂ ಚಾಮರಾಜನಗರ ಜಿಲ್ಲೆಗಳ ಎಸ್‌ಪಿಗಳ ಮಟ್ಟದಲ್ಲಿ ಚರ್ಚಿಸಿದ ನಂತರ ನಿರ್ಬಂಧ ತೆರವುಗೊಳಿಸಲಾಯಿತು. ಆದರೂ ತಮಿಳುನಾಡಿನ ಯಾವುದೇ ವಾಹನಗಳು ರಾಜ್ಯದತ್ತ ಮುಖ ಮಾಡಲಿಲ್ಲ. ಎರಡೂ ರಾಜ್ಯಗಳ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಂದ್ ಬಗ್ಗೆ ಖಚಿತ ಮಾಹಿತಿಯಿಲ್ಲದೆ ಆಗಮಿಸಿದ್ದ ತಮಿಳುನಾಡಿಗೆ ಹೋಗುವ ಪ್ರವಾಸಿಗರು ಪರದಾಡಿದರು. ಟ್ಯಾಕ್ಸಿ, ಆಟೋ ಹತ್ತಿ ಗಡಿಯವರೆಗೂ ಪ್ರಯಾಣಿಸಿದರು.
ಆಂಧ್ರದಿಂದ ಬಂದಿದ್ದ ನಾಲ್ವರು ಪ್ರವಾಸಿಗರು ಪಟ್ಟಣದಿಂದ ಗೂಡಲೂರಿಗೆ ಪ್ರಯಾಣಿಸುತ್ತಿದ್ದ ಆಟೋವನ್ನು ತಮಿಳುನಾಡು ಚೆಕ್ ಪೋಸ್ಟ್ ಪೊಲೀಸರು ತಡೆಗಟ್ಟಿದರು. ಮಧುಮಲೈ ಅರಣ್ಯದ ರಸ್ತೆಯಲ್ಲಿ ಆಟೋಗಳ ಪ್ರವೇಶ ನಿರ್ಬಂಧಿಸಿದ್ದರಿಂದ ವಾಪಸ್ ಕಳುಹಿಸಿದರು. ಈ ಪ್ರವಾಸಿಗರನ್ನು ಮಧುಮಲೈಗೆ ಹೋಗುತ್ತಿದ್ದ ಬೇರೆ ಕಾರುಗಳಿಗೆ ಹತ್ತಿಸಿ, ಅಲ್ಲಿಂದ ಬಸ್‌ಗಳಲ್ಲಿ ತೆರಳುವಂತೆ ಮಾರ್ಗದರ್ಶನ ಮಾಡಿ ಮಾನವೀಯತೆ ಮೆರೆದರು.
ನೆರೆ ರಾಜ್ಯಗಳವರು ಜಮೀನು ನೋಂದಣಿ ಮಾಡಿಸಿಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಕಾದು ನಿಂತಿದ್ದರು. ಯಾವುದೇ ಹೋಟೆಲ್‌ಗಳು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಹಸಿವು ನೀರಡಿಕೆಗಳಿಂದ ಬಳಲಿ ಬೆಂಡಾಗಿದ್ದರು. ಮಧ್ಯಾಹ್ನದ ನಂತರ ಕೆಲವು ಬೇಕರಿಗಳ ಬಾಗಿಲು ತೆರೆಸಿ ಕುಡಿಯುವ ನೀರು ಹಾಗೂ ಬಿಸ್ಕತ್‌ತಿಂದು ಹಸಿವು ನೀಗಿಸಿಕೊಂಡರು.