ಮಂಡ್ಯದಲ್ಲಿ ಟ್ರಾಮಾಕೇರ್ ಆಸ್ಪತ್ರೆ ಅವಶ್ಯಕ: ಬಜೆಟ್‌ನಲ್ಲಿ ಸೇರಿಸಲು ಶಿಫಾರಸು ಮಾಡಲು ಮನವಿ

20_01_Mdy_03(Hospital)
Published on

ಮಂಡ್ಯ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ರ ನಡುವೆ ಅಪಘಾತ ಸಂಭವಿಸಿದರೆ ಜನರಿಗೆ ಚಿಕಿತ್ಸೆ ಕೊಡಲು ಅನುಕೂಲವಾಗುವಂತೆ ಮಂಡ್ಯ ನಗರದಲ್ಲಿ 100 ಹಾಸಿಗೆಯ ಟ್ರಾಮಾ ಕೇರ್ ಆಸ್ಪತ್ರೆಯ ಅವಶ್ಯಕತೆ ಇದೆ. ಆದ್ದರಿಂದ ಬಜೆಟ್‌ನಲ್ಲಿ ಸೇರಿಸುವಂತೆ ಮುಖ್ಯಮಂತ್ರಿಗೆ ಶಿಫಾರಸು ಮಾಡಬೇಕೆಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಬಳಿ ಎಂಎಲ್‌ಸಿ ದಿನೇಶ್ ಗೂಳಿಗೌಡ ನೇತೃತ್ವದ ನಿಯೋಗ ಮನವಿ ಮಾಡಲಾಯಿತು.

ಶುಕ್ರವಾರ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗದ ಸದಸ್ಯರು, ಆಸ್ಪತ್ರೆಯ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮೈ-ಬೆ ರಾಷ್ಟ್ರೀಯ ಹೆದ್ದಾರಿ ಸೂಪರ್‌ಫಾಸ್ಟ್ ಮಾರ್ಗವಾಗಿದೆ. ಪರಿಣಾಮ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಹಿನ್ನೆಲೆಯಲ್ಲಿ ಈ ಎರಡೂ ನಗರಗಳ ಮಧ್ಯ ಭಾಗದಲ್ಲಿರುವ ಮಂಡ್ಯ ನಗರದಲ್ಲಿ 100 ಬೆಡ್‌ಗಳ ಹೊಸ ಟ್ರಾಮಾ ಕೇರ್ ಆಸ್ಪತ್ರೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಸೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಿಫಾರಸು ಮಾಡುವಂತೆ ಮನವಿ ಮಾಡಲಾಯಿತು.

ಬೆ-ಮೈ ಹೆದ್ದಾರಿಯಲ್ಲಿ ವಾಹನಗಳು ಹೆಚ್ಚಾಗಿ ಓಡಾಡುವುದರಿಂದ ಅಪಘಾತಗಳು ಸಂಭವಿಸಿದರೆ ಮೈಸೂರು ಅಥವಾ ಬೆಂಗಳೂರಿಗೆ ಗಾಯಾಳುಗಳನ್ನು ದಾಖಲಿಸಬೇಕಾದ ಪರಿಸ್ಥಿತಿ ಇದೆ. ಇದು ಬಹಳವೇ ದೂರವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಸೇರಿದಂತೆ ಕೆಲವು ಅಗತ್ಯ ತ್ವರಿತ ಚಿಕಿತ್ಸೆಯ ಅಗತ್ಯತೆ ಇರುತ್ತದೆ. ಆದರೆ, ಬೆಂಗಳೂರು ಇಲ್ಲವೇ ಮೈಸೂರಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹಾನಿಯಾಗುವ ಸಂಭವವೂ ಹೆಚ್ಚಿರುತ್ತದೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದೆ. ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದು, ಸುಮಾರು 150 ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸದಾ ಲಭ್ಯವಿರುತ್ತಾರೆ. ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಇರುವ 5 ಎಕರೆ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತಿರುವುದರಿಂದ ಸದರಿ ಜಾಗದಲ್ಲಿ ಟ್ರಾಮಾ ಕೇರ್ ಆಸ್ಪತ್ರೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತ್ವರಿತವಾಗಿ ಹೊಸದಾಗಿ ಪ್ರಾರಂಭಿಸಬಹುದಾಗಿದೆ. ಈ ಎಲ್ಲ ಅಗತ್ಯತೆ ಹಾಗೂ ಅವಕಾಶಗಳ ಬಗ್ಗೆ ಸಿಎಂಗೆ ಮನವರಿಕೆ ಮಾಡಿ ಈ ಸಾಲಿನ ಆಯವ್ಯಯದಲ್ಲಿ ಸೇರ್ಪಡೆಗೊಳಿಸಲು ಸಲಹೆ ನೀಡಬೇಕೆಂದು ಮನವಿ ಸಲ್ಲಿಸಿದರು.

ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಣ್ಣ, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ, ಸಂದರ್ಶ, ರಾಘು ಹಾಗೂ ಪ್ರಶಾಂತ್ ಹಾಜರಿದ್ದರು.

ಸಚಿವರಿಗೂ ಮನವಿ: ಟ್ರಾಮಾ ಕೇರ್ ಆಸ್ಪತ್ರೆ ಪ್ರಾರಂಭಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೂ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net