ತ್ರಾಸಿ-ಮರವಂತೆ ಗಡಿ ಗುರುತು ವಿವಾದ

grama panchayiti
grama panchayiti
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಬೈಂದೂರು ತಾಲೂಕಿನ ಮರವಂತೆ ಸ್ಥಳಗಳ ಮಧ್ಯ ಭಾಗದ ಗಡಿ ಗುರುತು ಮಾಡುವ ಕಾರ್ಯ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ. ಉಭಯ ಗ್ರಾಮ ಪಂಚಾಯಿತಿಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ತ್ರಾಸಿ, ಮರವಂತೆ ಮಧ್ಯ ಭಾಗದ ನಡುವೆ ತ್ರಾಸಿ ಗ್ರಾಮದ ಗಡಿ ಗುರುತು ಮಾಡಿಕೊಡುವಂತೆ ತ್ರಾಸಿ ಗ್ರಾಪಂ ಮನವಿ ಸಲ್ಲಿಸಿತ್ತು. ಅದರಂತೆ ಕುಂದಾಪುರ ತಹಸೀಲ್ದಾರ್ ರಾಷ್ಟ್ರೀಯ ಹೆದ್ದಾರಿ 66ರ ಬಳಿ ತ್ರಾಸಿ ಹಾಗೂ ಮರವಂತೆ ಪ್ರದೇಶ ಸಂಧಿಸುವ ಗಡಿ ಗುರುತು ಮಾಡುವಂತೆ ತ್ರಾಸಿ ಬೀಚ್ ಬಳಿ ಕುಂದಾಪುರ ಮತ್ತು ಬೈಂದೂರು ತಾಲೂಕು ಗಡಿ ನಿರ್ಧರಿಸಲು ಆದೇಶಿಸಿದ್ದರು. ಬೈಂದೂರು ತಾಲೂಕು ಕಚೇರಿ, ತಾಪಂ, ಸಂಬಂಧಪಟ್ಟ ಅಧಿಕಾರಿಗಳಿಗೆ ಗಡಿ ಗುರುತು ಮಾಡುವ ಬಗ್ಗೆ ಲಿಖಿತವಾಗಿ ತಿಳಿಸಲಾಗಿದೆ. ತಹಸೀಲ್ದಾರ್ ಆದೇಶದಂತೆ ಗಡಿ ಗುರುತು ಮಾಡಲಾಗುತ್ತಿದೆ. ಆಕ್ಷೇಪಣೆಗಳಿದ್ದರೆ ಲಿಖಿತವಾಗಿ ತಹಸೀಲ್ದಾರ್‌ಗೆ ಸಲ್ಲಿಸುವಂತೆ ಕಂದಾಯ ನಿರೀಕ್ಷಕ ರಾಘವೇಂದ್ರ ಹೇಳಿದರು. ಕಂದಾಯ ಇಲಾಖೆ ಅಧಿಕಾರಿಗಳು ತ್ರಾಸಿ, ಮರವಂತೆ ನಡುವೆ ಮಧ್ಯ ಭಾಗದಲ್ಲಿ ತ್ರಾಸಿ ಗ್ರಾಮದ ಗಡಿ ಗುರುತಿಸಿ ಗುರುತಿಗಾಗಿ ಕಲ್ಲು ನೆಟ್ಟರು. ಬಳಿಕ ನಾಮಫಲಕ ಅಳವಡಿಸುವ ಸಂಬಂಧ ಎರಡೂ ಪಂಚಾಯಿತಿಯವರು ಮಾತನಾಡಿಕೊಂಡು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ಮಾತಿನ ಚಕಮಕಿ: ಗಡಿ ಗುರುತು ವಿಚಾರದಲ್ಲಿ ತ್ರಾಸಿ, ಮರವಂತೆ ಗ್ರಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ವಿವಾದಕ್ಕೆ ಕಾರಣವಾಯಿತು. ಕುಂದಾಪುರ ತಾಲೂಕಿನ ಆರ್‌ಐ, ಸರ್ವೇಯರ್ ಗಡಿ ಗುರುತು ಮಾಡುತ್ತಿದ್ದಾರೆ. ಆದರೆ ಬೈಂದೂರು ತಾಲೂಕು ಕಚೇರಿಯ ಯಾವುದೇ ಅಧಿಕಾರಿಗಳು ಇಲ್ಲದಿರುವಾಗ ಗಡಿ ಗುರುತು ಕಾರ್ಯ ನಡೆಸುತ್ತಿರುವುದು ಸರಿಯಲ್ಲ. ಎರಡೂ ತಾಲೂಕು ಆಡಳಿತ ಜಂಟಿಯಾಗಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕು. ಇದಕ್ಕೆ ಮರವಂತೆ ಪಂಚಾಯಿತಿಯ ಸಮ್ಮತಿ ಇಲ್ಲ ಎಂದು ಸದಸ್ಯರು ಸ್ಥಳದಿಂದ ನಿರ್ಗಮಿಸಿದರು. ಅನೇಕ ವರ್ಷಗಳ ಹಿಂದೆ ಸೌಪರ್ಣಿಕ ಸೇತುವೆ ಸಮೀಪ ತ್ರಾಸಿ ಗ್ರಾಪಂ ವತಿಯಿಂದ ಅಳವಡಿಸಲಾಗಿದ್ದ ನಾಮಫಲಕ ಕಿತ್ತು ಹಾಕಿದ ಘಟನೆ ನಡೆದಿತ್ತು. ಇದೀಗ ಮತ್ತೆ ವಿವಾದ ಸೃಷ್ಟಿಯಾಗಿದೆ. ತ್ರಾಸಿ ಪಿಡಿಒ ಶೋಭಾ, ಮರವಂತೆ ಪಿಡಿಒ ಗೀತಾ, ತ್ರಾಸಿ ಗ್ರಾಮ ಆಡಳಿತಾಧಿಕಾರಿ ಅನಿಲ್, ಮರವಂತೆ ಗ್ರಾಮ ಆಡಳಿತಾಧಿಕಾರಿ ಸಂದೀಪ್ ಭಂಡಾರ್ಕಾರ್, ತ್ರಾಸಿ ಗ್ರಾಪಂ ಲೆಕ್ಕ ಸಹಾಯಕ ಶಿವಾನಂದ, ತ್ರಾಸಿ, ಮರವಂತೆ ಗ್ರಾಪಂ ಸದಸ್ಯರು, ಮಾಜಿ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಮರವಂತೆ ಗ್ರಾಪಂ ಸದಸ್ಯರ ಆಕ್ಷೇಪ

ತಹಸೀಲ್ದಾರ್ ಆದೇಶದಂತೆ ತ್ರಾಸಿ ಗ್ರಾಮದ ಸೌಪರ್ಣಿಕ ನದಿ ಸೇತುವೆ ಸಮೀಪ ಕುಂದಾಪುರ, ಬೈಂದೂರು ತಾಲೂಕು ಗಡಿ ನಿರ್ಧರಿಸಲು ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ತಾಲೂಕು ಸರ್ವೇಯರ್ ಯೂಸೂಫ್, ಮಹೇಶ್ ಸ್ಥಳಕ್ಕೆ ಆಗಮಿಸಿ ಗಡಿ ಗುರುತು ಮಾಡಿದರು. ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಮರವಂತೆ ಗ್ರಾಪಂ ಅಧ್ಯಕ್ಷ ಪಟಗಾರ್ ನಡುವೆ ಗಡಿ ಗುರುತು ಮಾಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಏಕಪಕ್ಷೀಯವಾಗಿ ಎರಡು ತಾಲೂಕುಗಳ ಗಡಿ ಗುರುತು ಮಾಡುವ ಬಗ್ಗೆ ಮರವಂತೆ ಗ್ರಾಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ತ್ರಾಸಿ-ಮರವಂತೆ ಗ್ರಾಮದ ಗಡಿ ಗುರುತಿಸುವ ವಿಚಾರದಲ್ಲಿ ಸಮಸ್ಯೆಗಳಿತ್ತು. ಗಡಿ ಗುರುತಿಸುವ ಬಗ್ಗೆ ಮರವಂತೆ ಗ್ರಾಮ ಪಂಚಾಯಿತಿಯವರಿಗೆ ಅಸಮಾಧಾನ ಇದೆ. ಇಲಾಖೆಯಲ್ಲಿ ವ್ಯವಹರಿಸಲು, ಇನ್ನಿತರ ಕಾರಣಗಳಿಗೆ ತ್ರಾಸಿ ಗ್ರಾಮದ ಗಡಿ ಗುರುತು ಮಾಡಿಕೊಡಬೇಕೆಂಬ ಮನವಿಗೆ ಕಂದಾಯ ಇಲಾಖೆ ಸ್ಪಂದಿಸಿದೆ. ಬೀಚ್‌ನ ಶೇ.80ರಷ್ಟು ಭಾಗ ತ್ರಾಸಿ ಗ್ರಾಮಕ್ಕೆ ಸೇರ್ಪಡೆಯಾಗಿದೆ. ಮರವಂತೆ ಗ್ರಾಪಂ ಪ್ರತ್ಯೇಕವಾಗಿ ಸರ್ವೇ ನಡೆಸಿ ಗಡಿ ಗುರುತು ಮಾಡಿಸುವುದಾದರೆ ಸಂಪೂರ್ಣ ಸಹಕಾರ ನೀಡಲಾಗುವುದು. ನಮ್ಮ ಉದ್ದೇಶ ತ್ರಾಸಿ ಗ್ರಾಮದ ಗಡಿ ಗುರುತಿಸುವುದಾಗಿದೆ. ಮಿಥುನ್ ದೇವಾಡಿಗ, ತ್ರಾಸಿ ಗ್ರಾಪಂ ಅಧ್ಯಕ್ಷ https://www.vijayavani.net/sports-meet-organized-in-kundapur https://www.vijayavani.net/malpe-dharma-jagruthi-sabhe-chakravarti

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net