ದೊಡ್ಡಬಳ್ಳಾಪುರದಲ್ಲಿ ಕಸದ ಹಾವಳಿ, ರಸ್ತೆ ಬದಿ ತ್ಯಾಜ್ಯ ರಾಶಿ, ಕಸ ವಿಂಗಡಣೆೆಗೆ ಜನರ ನಿರಾಸಕ್ತಿ

8be80021-a784-48f5-a245-f107d487a101
Published on

ಬೆಂಗಳೂರು ಗ್ರಾಮಾಂತರ: ಕಸ ವಿಂಗಡಣೆ, ಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ದೊಡ್ಡಬಳ್ಳಾಪುರ ನಗರಸಭೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿ ಜನರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಪರಿಣಾಮವಾಗಿ ನಗರದ ಹೃದಯ ಭಾಗದಲ್ಲೇ ಕಸದ ಸಮಸ್ಯೆ ಉಲ್ಬಣಿಸಿದೆ.

ತಾಲೂಕು ಕಚೇರಿ ಸಮೀಪದ ಮುಖ್ಯರಸ್ತೆಗಳಲ್ಲೇ ತ್ಯಾಜ್ಯ ರಾಶಿ ಕಂಡುಬರುತ್ತಿದೆ. ಪ್ರತಿ ನಿತ್ಯ ನಗರಸಭೆ ಪೌರಕಾರ್ಮಿಕರು ಒಣ ಹಾಗೂ ಹಸಿ ಕಸ ಮಿಶ್ರಣವಾಗಿರುವ ತ್ಯಾಜ್ಯರಾಶಿ ತೆರವುಗೊಳಿಸಲು ಹೆಣಗಾಡುವಂತಾಗಿದೆ. ಮನೆಗಳ ಬಳಿ ಕಸದ ಗಾಡಿಗಳು ಬಂದರೂ ಸಾರ್ವಜನಿಕರು ಕಸ ಹಾಕದೆ ರಸ್ತೆ ಬದಿ ಎಸೆದು ಹೋಗುತ್ತಿದ್ದಾರೆ ಎಂದು ಪೌರಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಹಸಿ ಹಾಗೂ ಒಣ ಕಸ ವಿಂಗಡಿಸಿ ನೀಡುತ್ತಿಲ್ಲವಾದ್ದರಿಂದ ಕಸ ಪಡೆಯಲು ಪೌರಕಾರ್ಮಿಕರು ಹಿಂದೇಟು ಹಾಕುವುದರಿಂದ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯುತ್ತಾರೆ ಎಂಬ ಮಾತು ಕೇಳಿಬಂದಿದೆ. ಕಸ ವಿಂಗಡಣೆಯೇ ದೊಡ್ಡ ಕಷ್ಟ ಎಂಬಂತೆ ಜನ ವರ್ತಿಸುತ್ತಾರೆ ಎಂದು ಪೌರಕಾರ್ಮಿಕರು ತಿಳಿಸಿದ್ದಾರೆ.

ಹೆಚ್ಚಿದ ಪ್ಲಾಸ್ಟಿಕ್ ತ್ಯಾಜ್ಯ: ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿಲ್ಲ, ಮಾರುಕಟ್ಟೆಗಳಲ್ಲಿ ನಗರದ ಪ್ರತಿ ಅಂಗಡಿ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿದೆ. ನಗರಸಭೆ ದಂಡ ಪ್ರಯೋಗವೂ ನಿರೀಕ್ಷಿತ ಯಶ ಕಂಡಿಲ್ಲ. ಹಸಿ ಕಸದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಮಿಶ್ರಣಗೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಮಿಶ್ರ ಕಸ ಸಾಗಣೆ: ಪ್ರತಿ ದಿನ ಪೌರಕಾರ್ಮಿಕರು ರಸ್ತೆ ಬದಿ ಕಸದ ರಾಶಿ ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮಿಶ್ರಿತ ಕಸ ನೇರವಾಗಿ ಡಂಪಿಂಗ್ ಯಾಡ್‌ರ್ ಸೇರುತ್ತಿದೆ. ಬೆಳಗ್ಗೆ ಕಸ ಸಂಪೂರ್ಣ ತೆರವುಗೊಳಿಸಿದರೂ ರಾತ್ರಿ ವೇಳೆಗಾಗಲೇ ಮತ್ತೆ ಭರ್ತಿಯಾಗುವ ದೃಶ್ಯ ಸಾಮಾನ್ಯವಾಗಿದೆ. ರಸ್ತೆ ಬದಿ ಎಸೆಯುವುದರಿಂದ ತೆರೆದ ಚರಂಡಿಗಳಿಗೂ ಕಸ ಸೇರ್ಪಡೆಯಾಗುತ್ತಿದೆ. ನಗರದ ಹೃದಯ ಭಾಗದಲ್ಲೆ ಕಸದ ಬ್ಲ್ಯಾಕ್ ಸ್ಪಾಟ್‌ಗಳು ನಿರ್ಮಾಣವಾಗುತ್ತಿರುವುದು ನಗರದ ಸೌಂದರ್ಯಕ್ಕೆ ಧಕ್ಕೆ ತರುವುದರ ಜತೆಗೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ.

ಹೋಟೆಲ್, ಮಾಂಸದಂಗಡಿ ಕಸ: ಕೋಳಿ ಹಾಗೂ ಮಾಂಸ ಮಾರಾಟ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿಜನ್ಯ ಕಸವೂ ಸೇರುತ್ತಿವೆ. ಜತೆಗೆ ರಸ್ತೆ ಬದಿ ಹೋಟೆಲ್ಗಳ ಬಲ್ಕ್ ಕಸವೂ ಸೇರಿ ಎಲ್ಲೆಂದರಲ್ಲಿ ರಾಶಿ ಕಾಣಿಸಿಕೊಳ್ಳುತ್ತಿದೆ.

ಎಷ್ಟೇ ಹೇಳಿದರೂ ಹಸಿ ಹಾಗೂ ಒಣ ಕಸ ಮಿಶ್ರಣ ಮಾಡಿಯೇ ನೀಡಲು ಬರುತ್ತಾರೆ. ವಿಂಗಡಿಸಿ ಕೊಡಿ ಎಂದರೆ ನಮ್ಮ ಮುಂದೆಯೇ ರಸ್ತೆ ಬದಿ ಎಸೆದು ಹೋಗುತ್ತಾರೆ. ಕೆಲವರು ಜಗಳಕ್ಕೆ ಬರುತ್ತಾರೆ. ಹೆಸರು ಹೇಳಲಿಚ್ಚಿಸದ ಪೌರಕಾರ್ಮಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net