

ಬ್ಯಾಡಗಿ: ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಸುತ್ತಲೂ ಬಹುದಿನಗಳಿಂದ ಓಡಾಡುತ್ತ ಭೀತಿ ಮೂಡಿಸಿದ್ದ ಚಿರತೆ ಸೋಮವಾರ ಬೋನಿಗೆ ಬಿದ್ದಿದೆ.
ಎರಡು ತಿಂಗಳಿಂದ ಬಿದರಕಟ್ಟೆ, ಶಿಡೇನೂರು, ಕೆರೂಡಿ, ಕಳಗೊಂಡ ಸೇರಿದಂತೆ ವಿವಿಧ ಗ್ರಾಮಗಳ ಹೊರವಲಯದಲ್ಲಿ ಚಿರತೆ ಓಡಾಟ ಕಂಡು ಜನ ಬೆಚ್ಚಿಬಿದ್ದಿದ್ದರು. ಕೆಲವರು ಚಿರತೆಯ ಓಡಾಟ ಕಂಡು ಭಯದಲ್ಲೇ ಕಾಲ ಕಳೆಯುವಂತಾಗಿತ್ತು. ಹೀಗಾಗಿ ಬಹುತೇಕ ರೈತರು ಸಂಜೆಯಾಗುತ್ತಿದ್ದಂತೆ ಮನೆ ಸೇರುತ್ತಿದ್ದರು. ಸಾಕುಪ್ರಾಣಿಗಳು, ನಾಯಿಗಳ ಬಗ್ಗೆ ಎಚ್ಚರ ವಹಿಸುತ್ತಿದ್ದರು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸತತ ಒತ್ತಡ ಹಾಕಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಎರಡು ತಿಂಗಳಿಂದ ಆಗಾಗ ಬೋನಿನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಪ್ರಯತ್ನಪಟ್ಟಿದ್ದರು. ಆದರೆ, ಚಿರತೆ ಬೋನಿನ ಸಮೀಪದಲ್ಲೇ ಓಡಾಡಿದರೂ, ಬೋನಿಗೆ ಸಿಲುಕಿರಲಿಲ್ಲ. ಕಳೆದ ವಾರದಿಂದ ಜೋರಾಗಿ ಬಿದ್ದ ಮಳೆಯಿಂದ ಕೆರೆ, ಕಟ್ಟೆ ಹಾಗೂ ತಗ್ಗುಪ್ರದೇಶಗಳಲ್ಲಿ ನೀರು ನಿಂತುಕೊಂಡಿತ್ತು. ಹೀಗಾಗಿ ಬೇರೆಡೆ ಸಾಗದೇ ಚೀರುತ್ತಿದ್ದ ನಾಯಿ ತಿನ್ನಲು ಬಂದ ಚಿರತೆ ಬೋನಿನಲ್ಲಿ ಸಿಲುಕಿಕೊಂಡಿದೆ. ಬಳಿಕ ತನ್ನ ಗರ್ಜನೆ, ಕೂಗಾಟ ಶುರು ಮಾಡಿದ್ದು, ಪಕ್ಕದ ಹೊಲದಲ್ಲಿದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಬಳಿಕ ಅಧಿಕಾರಿಗಳ ತಂಡ ಚಿರತೆಯನ್ನು ಬೇರೆಡೆ ಸ್ಥಳಾಂತರಿಸಿದರು.
ಜಿಲ್ಲಾ ಅರಣ್ಯ ವೃತ್ತ ಅಧಿಕಾರಿ ಎಸ್.ಬಾಲಕೃಷ್ಣ, ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ, ಗಣೇಶ ಬಿ, ಶ್ರೇಣಿಕರಾಜ ಚಿನ್ನಿಕಟ್ಟಿ ಇತರರಿದ್ದರು.