

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕಟ್ಟಡ, ಫ್ಯಾಕ್ಟರಿ ಮೊದಲಾದ ಕಡೆ ಕೆಲಸ ಮಾಡುವ ಕಾರ್ಮಿಕರನ್ನು ಲಾರಿ, ಪಿಕಪ್ ಮೊದಲಾದ ತೆರೆದ ವಾಹನಗಳಲ್ಲಿ ಕರೆದೊಯ್ಯುತ್ತಿರುವುದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಂಡು ಬರುತ್ತಿದ್ದು, ದುರ್ಘಟನೆ ಮರುಕಳಿಸುವ ಮುನ್ನ ಕಾರ್ಮಿಕ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಮಂಗಳೂರು ನಗರದಲ್ಲೂ ವಿವಿಧ ಕಡೆ ಕಟ್ಟಡ ನಿರ್ಮಾಣ ಸೈಟ್‌ಗಳಿಗೆ ಪುರುಷರು, ಮಹಿಳೆಯರು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನು ತೆರೆದ ವಾಹನಗಳಲ್ಲಿ ಕರೆದೊಯ್ಯುವ ದೃಶ್ಯ ಪ್ರತಿದಿನ ಕಂಡು ಬರುತ್ತಿದೆ. ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಾರ್ಮಿಕರು ವಾಸವಿರುವ ಬೈಕಂಪಾಡಿ, ಕೂಳೂರು, ಪಂಜಿಮೊಗರು ಮೊದಲಾದ ಕಡೆ ಕಾರ್ಮಿಕರು ವಾಸ್ತವ್ಯ ಇರುವ ಸ್ಥಳದಿಂದ ಬೆಳಗ್ಗೆ ಕರೆದೊಯ್ದು, ಸಾಯಂಕಾಲ ತೆರೆದ ವಾಹನಗಳಲ್ಲಿ ಕರೆ ತಂದು ಬಿಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಸಾರಿಗೆ ನಿಯಮ ಪ್ರಕಾರ ಟೆಂಪೋ ಟ್ರಾೃಕ್ಸ್, ಪಿಕಪ್, ಟೆಂಪೊ, ಲಾರಿ ಮೊದಲಾದ ತೆರೆದ ವಾಹನಗಳಲ್ಲಿ ಜನರನ್ನು ಸಾಗಾಟ ಮಾಡುವಂತಿಲ್ಲ. ಹಾಗಿದ್ದರೂ ಟೆಂಪೋ ಟ್ರಾೃಕ್ಸ್, ಪಿಕಪ್‌ಗಳಲ್ಲಿ 25-30ಕ್ಕಿಂತ ಅಧಿಕ ಕಾರ್ಮಿಕರನ್ನು ಒತ್ತೊತ್ತಾಗಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಜತೆಗೆ ಅಜಾಗರುಕತೆಯಿಂದ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗುವುದು ಕಂಡು ಬರುತ್ತಿದೆ. ಇದು ಅತ್ಯಂತ ಅಪಾಯಕಾರಿ. ವಾಹನದ ಸಾಮರ್ಥ್ಯಕ್ಕಿಂತ ಅಧಿಕ ಮಂದಿಯ ಸಾಗಾಟ ಅಪಘಾತಕ್ಕೆ ಆಹ್ವಾನ ನೀಡಿದಂತೆ.
ಕಾರ್ಮಿಕರು ಬೆಳಗ್ಗೆ ಒಟ್ಟು ಸೇರುವ ಸ್ಥಳ ಸುರತ್ಕಲ್ ಲಿಂಗಪ್ಪಯ್ಯ ಕಾಡು, ಉರ್ವಾಸ್ಟೋರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನಿಂದಲೂ ಕರೆದೊಯ್ಯಲಾಗುತ್ತದೆ. ಉಡುಪಿಯಲ್ಲೂ ಕಾರ್ಮಿಕರು ಹೆಚ್ಚು ವಾಸ್ತವ್ಯ ಇರುವಲ್ಲಿಂದ ಅವರನ್ನು ಕರೆದೊಯ್ಯಲಾಗುತ್ತಿದೆ. ನಿಗದಿಗಿಂತ ಅಧಿಕ ಸಂಖ್ಯೆಯ ಜನರನ್ನು ಸಾಗಾಟ ಮಾಡುವುದು ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ.
8 ಮಂದಿ ಮೃತಪಟ್ಟಿದ್ದರು 2012 ಮೇ 6ರಂದು ಜೋಕಟ್ಟೆ ದೊಡ್ಡಕೇರಿ ಎಂಬಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 8 ಕಾರ್ಮಿಕರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದರು. ಎಂಎಸ್‌ಇಝೆಡ್‌ನಿಂದ ಕಾರ್ಮಿಕರನ್ನು ಕರೆ ತರುತ್ತಿದ್ದಾಗ ಟೆಂಪೋ ಟ್ರಾೃಕ್ಸ್ ಪಲ್ಟಿಯಾಗಿ ಬಿದ್ದು ಅಪಘಾತ ಸಂಭವಿಸಿತ್ತು. ಹರ್ಯಾಣ, ಪಂಜಾಬ್ ಮೂಲದ ಕಾರ್ಮಿಕರು ಇದರಲ್ಲಿ ಮೃತಪಟ್ಟಿದ್ದರು. 2009 ಅ.10ರಂದು ಪಣಂಬೂರು ಬಳಿ ಸಂಭವಿಸಿದ್ದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಹೊಸಬೆಟ್ಟುವಿನಲ್ಲಿರುವ ಫ್ಯಾಕ್ಟರಿಯೊಂದಕ್ಕೆ ಸೇರಿದ ಕಾರ್ಮಿಕರಾಗಿದ್ದರು. ಆ ಬಳಿಕ ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಇಂತಹ ವಾಹನಗಳ ಮೇಲೆ ನಿಗಾ ಇಟ್ಟಿತ್ತು. ತೆರೆದ ವಾಹನದಲ್ಲಿ ಕಾರ್ಮಿಕರ ಸಾಗಾಟಕ್ಕೆ ಕಡಿವಾಣ ಬಿದ್ದಿತ್ತು. ಪ್ರಸಕ್ತ ಮತ್ತೆ ಈ ವ್ಯವಸ್ಥೆ ಆರಂಭಗೊಂಡಿದ್ದು, ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಮಾಯಕರ ಪ್ರಾಣ ಹೋಗುವ ಮುನ್ನ ಕಡಿವಾಣ ಹಾಕಬೇಕಾಗಿದೆ.
ಗುತ್ತಿಗೆದಾರರು ಕಾರ್ಮಿಕರನ್ನು ತೆರೆದ ವಾಹನದಲ್ಲಿ ಸಾಗಾಟ ಮಾಡುತ್ತಾರೆ. ಕೆಲಸದ ಸ್ಥಳದಲ್ಲೂ ಅವರಿಗೆ ಯಾವುದೇ ಸುರಕ್ಷತೆ ಕಲ್ಪಿಸುತ್ತಿಲ್ಲ. ಅವರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಬಗ್ಗೆ ಇರುವ ಕಾನೂನು ವ್ಯವಸ್ಥಿತವಾಗಿ ಅನುಷ್ಠಾನವಾಗಬೇಕು. ಜಯಂತ್ ಮಂಗಳೂರು ಸಾಮಾಜಿಕ ಕಾರ್ಯಕರ್ತ ಲಾರಿ, ಟೆಂಪೋ ಮೊದಲಾದ ತೆರೆದ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ಕಾನೂನು ಬಾಹಿರ. ಇಂತಹ ವಾಹನ ಕಂಡು ಬಂದರೆ ಸಾರ್ವಜನಿಕರು ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಂಜುನಾಥ ಶೆಟ್ಟಿ ಎಸಿಪಿ, ಸಂಚಾರ ವಿಭಾಗ