

ರಾಮನಗರ/ವಿಜಯಪುರ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ದಿಢೀರ್ ಮುಷ್ಕರದ ಪರಿಣಾಮ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ, ಮುಷ್ಕರ ಯಶಸ್ವಿಗೊಳಿಸಬೇಕೆಂಬ ಭರದಲ್ಲಿ ರಾಮನಗರದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಅಪರಿಚಿತರು ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ತೂರಿದ್ದಾರೆ. ಬಸ್ಸಿನ ಮುಂಭಾಗದ ಗಾಜು ಪುಡಿಯಾಗಿದ್ದು, ಪ್ರಯಾಣ ವಿವರದ ಬೋರ್ಡ್ ಇರುವ ಕಡೆ ಕಲ್ಲು ಬಿದ್ದ ಗುರುತಾಗಿದೆ. ಪ್ರಯಾಣಿಕರಿಗೆ ಯಾರಿಗೂ ತೊಂದರೆಯಾಗಿಲ್ಲ. ಮೈಸೂರಿನಿಂದ ಬೆಂಗಳೂರಿಗೆ ಬಸ್ ಸಂಚರಿಸುತ್ತಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದೆಡೆ ವಿಜಯಪುರ ಜಿಲ್ಲಾ ಕೇಂದ್ರದಲ್ಲಿರುವ ಬಸ್ನಿಲ್ದಾಣದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದ್ದರು. ಇದಕ್ಕೆ ಅವಕಾಶ ನೀಡದ ಪೊಲೀಸರು ಸಾರಿಗೆ ನೌಕರರ ನಾಯಕರೆನಿಸಿಕೊಂಡವರ ಕತ್ತಿನಪಟ್ಟಿ ಹಿಡಿದೆಳೆದುಕೊಂಡು ಹೋದ ದೃಶ್ಯ ಕಂಡುಬಂತು. ಕೂಡಲೇ ಉಳಿದ ನೌಕರರೂ ಜತೆಗೂಡಿ ಪೊಲೀಸರಿಗೆ ಮನವಿ ಮಾಡಿಕೊಂಡು ಇಬ್ಬರು ಪೊಲೀಸ್ ವಶದಿಂದ ಬಿಡಿಸಿಕೊಂಡು ಹೋದರು.